ಪುಣೆಯಲ್ಲಿ ನಾನು ಅಧ್ಯಯನ ಮಾಡಿದ ಕಾಲೇಜಿನ ಜಾತಿ ತಾರತಮ್ಯದಿಂದ ಇಂಗ್ಲೆಂಡ್‌ನಲ್ಲಿ ಉದ್ಯೋಗ ಕಳೆದುಕೊಂಡಿದ್ದೇನೆ ಎಂದು ದಲಿತ ಯುವಕನೋರ್ವ ಆರೋಪಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ದಲಿತ ಯುವಕ ಪ್ರೇಮ್ ಬಿರ್ಹಾಡೆ, ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್ ಕಾಲೇಜಿನ ಕಾರಣದಿಂದಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
“ನಾನು ಕಾಲೇಜಿನಲ್ಲಿ ಓದಿರುವ ಬಗ್ಗೆ ಕಂಪನಿ ದೃಢೀಕರಣ ಕೇಳಿತ್ತು. ಆದರೆ, ಕಾಲೇಜಿನವರು ಪ್ರತಿಕ್ರಿಯಿಸಿಲ್ಲ. ಕಾರಣ ಅವರಿಗೆ ನಾವು ಜೀವನದಲ್ಲಿ ಮುಂದೆ ಬರುವುದು ಇಷ್ಟ ಇಲ್ಲ. ಇದು ನನ್ನ, ನನ್ನ ಕುಟುಂಬದ, ನನ್ನ ಸಮುದಾಯದ ಹೋರಾಟ” ಎಂದು ಪ್ರೇಮ್ ಬಿರ್ಹಾಡೆ ಅಳಲು ತೋಡಿಕೊಂಡಿದ್ದಾರೆ.
ಕಾಲೇಜು ಈ ಆರೋಪಗಳನ್ನು ನಿರಾಕರಿಸಿದೆ ಮತ್ತು ಅಕ್ಟೋಬರ್ 14ರಂದು ನೀಡಿದ ಪ್ರಮಾಣಪತ್ರದ ಪ್ರತಿಯನ್ನು ಹಂಚಿಕೊಂಡಿದೆ. ಕಾಲೇಜು ಅಥವಾ ಯಾವುದೇ ಸಿಬ್ಬಂದಿಗಳು ಅವರ ಜಾತಿ ಬಗ್ಗೆ ಚರ್ಚಿಸಿಲ್ಲ. ಎಜ್ಯುಕೇಶನ್ ರೆಫೆರೆನ್ಸ್ ನೀಡದಿರುವುದು ಸಂಸ್ಥೆಯ ನಿಯಮಗಳು ಮತ್ತು ಶಿಸ್ತಿನ ಕಾರಣದಿಂದಾಗಿ ಎಂದು ತಿಳಿಸಿದೆ.
ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಈ ಕುರಿತು ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದೆ.
ವಿಬಿಎ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಶುಕ್ರವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್ ಕಾಲೇಜು ದಲಿತ ಯುವಕನೋರ್ವನ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ದೃಢಪಡಿಸಲು ನಿರಾಕರಿಸಿದ್ದರಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶವನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಕಂಪನಿ ಕಳಿಸಿದ್ದ ಈ ಮೇಲ್‌ಗೆ ಪ್ರತಿಕ್ರಿಯಿಸಲು ಕಾಲೇಜಿನವರು ತಡ ಮಾಡಿದ್ದು ಏಕೆ? ಏಕೆಂದೆ, ಪ್ರೇಮ್ ಬಿರ್ಹಾಡೆ ಓರ್ವ ದಲಿತ ಯುವಕ ಎಂದು ಹೇಳಿದ್ದಾರೆ.
ಕಾಲೇಜಿನ ಕಾರಣಕ್ಕೆ ಕೆಲಸದ ಅವಕಾಶ ಕಳೆದುಕೊಂಡ ಹಿನ್ನೆಲೆ ಬಿರ್ಹಾಡೆ ಅವರ ಕುಟುಂಬವು ಕಾಲೇಜಿನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಉದ್ದೇಶಿಸಿದೆ ಎಂದು ವಿಬಿಎ ನಾಯಕರು ಹೇಳಿದ್ದಾರೆ. ಈ ನಡುವೆ ಮಹಿಳಾ ಶಿಕ್ಷಕರನ್ನು ನಿಂದಿಸಿದ್ದಕ್ಕಾಗಿ ಯುವಕನ ವಿರುದ್ಧ ದೂರು ನೀಡಿರುವುದಾಗಿ ಕಾಲೇಜು ತಿಳಿಸಿದೆ.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕಾಲೇಜನ್ನು ನಡೆಸುತ್ತಿರುವ ಪ್ರೋಗ್ರೆಸಿವ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಗಜಾನನ್ ಎಕ್ಬೋಟೆ, “ಕಂಪನಿಯು ನಮಗೆ ಎರಡು ಇ-ಮೇಲ್‌ಗಳನ್ನು ಕಳುಹಿಸಿತ್ತು. ಒಂದು ಸೆಪ್ಟೆಂಬರ್ 30 ರಂದು, ಇನ್ನೊಂದು ಶುಕ್ರವಾರ ಬೆಳಿಗ್ಗೆ. ಇ-ಮೇಲ್‌ಗಳಿಗೆ ಪ್ರತಿಕ್ರಿಯಿಸಲು ಯಾವುದೇ ಸಮಯದ ಅವಧಿಯನ್ನು ಉಲ್ಲೇಖಿಸಿರಲಿಲ್ಲ. ವಿದ್ಯಾರ್ಥಿಯು ಶಿಫಾರಸು ಪತ್ರ ಮತ್ತು ಒರಿಜಿನಲ್ ಸರ್ಟಿಫಿಕೇಟ್‌ಗಾಗಿ ಕೋರಿದ್ದರು. ಪೊಲೀಸ್ ತನಿಖೆ ಇನ್ನೂ ಬಾಕಿ ಇರುವುದರಿಂದ ಶಿಫಾರಸು ಪತ್ರವನ್ನು ನೀಡಲು ಸಾಧ್ಯವಾಗಿಲ್ಲ. ಆದರೆ, ಕಂಪನಿಯು ಎರಡನೇ ಬಾರಿಗೆ ಇ-ಮೇಲ್ ಕಳುಹಿಸಿದ 10 ನಿಮಿಷಗಳ ಒಳಗೆ ನಾವು ಸರ್ಟಿಫಿಕೇಟ್ ಅನ್ನು ಒದಗಿಸಿದ್ದೇವೆ” ಎಂದು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ರಾಯ್ ಬರೇಲಿ ದಲಿತ ವ್ಯಕ್ತಿ ಗುಂಪುಹತ್ಯೆ; ಬಲಿಪಶು ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ


