- Advertisement -
- Advertisement -
ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿತೊಡಗಿಕೊಂಡಿದ್ದರು. ಈ ಶಿಕ್ಷಕರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷಾ ಅವಧಿಯನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಲಾಗಿತ್ತು. ಈಗ ಅಕ್ಟೋಬರ್ 31ರವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಭಾನುವಾರ ಸಂಜೆಯ ವೇಳೆಗೆ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಪ್ರದೇಶವನ್ನು ಹೊರತುಪಡಿಸಿ ರಾಜ್ಯದಾದ್ಯಂತ ಸುಮಾರು 1.43 ಕೋಟಿ ಕುಟುಂಬಗಳಲ್ಲಿ 5.42 ಕೋಟಿ ಜನರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ 56.56 ಲಕ್ಷ ಜನರಿದ್ದು, 18.31 ಲಕ್ಷ ಕುಟುಂಬಗಳನ್ನು ಗಣತಿದಾರರು ಸಂಪರ್ಕಿಸುವುದರೊಂದಿಗೆ ಒಟ್ಟಾರೇ 39.83 ಲಕ್ಷ ಜನರ ಸಮೀಕ್ಷೆ ಕಾರ್ಯ ಆಗಿದ್ದು, ಶೇ. 45. 97 ರಷ್ಟು ಪ್ರಗತಿ ಆಗಿದೆ ಎಂದು ಸರ್ಕಾರವು ಮಾಹಿತಿ ನೀಡಿದೆ.
ಇದುವರೆಗೆ ಮಂಡ್ಯ, ತುಮಕೂರು, ಹಾವೇರಿ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಏಳು ಜಿಲ್ಲೆಗಳು ಶೇ.100ರಷ್ಟು, ಗದಗ, ಕೊಪ್ಪಳ, ಶಿವಮೊಗ್ಗ ಶೇ.99ರಷ್ಟು ಸಮೀಕ್ಷೆ ಆಗಿದೆ. ರಾಯಚೂರು, ಬಾಗಲಕೋಟೆ, ಉತ್ತರ ಕನ್ನಡ, ಹಾಸನ ಜಿಲ್ಲೆಗಳು ಶೇ.97ರಷ್ಟು, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೇ.95ರಷ್ಟು, ರಾಮನಗರ, ಧಾರವಾಡ, ಬೀದರ್‌ನಲ್ಲಿ ಶೇ.86, 88 ಮತ್ತು 79.46 ರಷ್ಟು ಸಮೀಕ್ಷೆ ಆಗಿದ್ದು, ಸ್ವಲ್ಪ ನಿಧಾನಗತಿಯಲ್ಲಿ ಸಾಗಿದೆ. ಇನ್ನೂ ಕೆಲಸ ಬಾಕಿ ಇರುವ ಜಿಲ್ಲೆಗಳಲ್ಲಿ ಮಾತ್ರ ಮುಂದುವರಿಸಲಾಗಿದೆ ಎಂದು ಸಚಿವರಾದ ಶಿವರಾಜ್ ತಂಗಡಗಿ ಮಾಧ್ಮಗಳಿಗೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 4 ರಂದು ಸಮೀಕ್ಷೆ ಪ್ರಾರಂಭವಾದ ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆಯು ಶೇ. 45.97 ರಷ್ಟು ಪ್ರಗತಿಯಾಗಿದೆ. ಬೆಂಗಳೂರಿನಲ್ಲಿ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.


