ವಾಷಿಂಗ್ಟನ್, ಅ. 20 – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಮತ್ತೊಂದು ವಾಗ್ದಾಳಿ ನಡೆಸಿದ್ದಾರೆ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಿದರೆ “ಭಾರಿ ಸುಂಕಗಳನ್ನು” ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಟ್ರಂಪ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾದಿಂದ ತೈಲ ಆಮದು ಮಾಡುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಟ್ರಂಪ್. “ನಾನು ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ,” ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕ, ಉಕ್ರೇನ್ ಯುದ್ಧದ ಮಧ್ಯೆ, ರಷ್ಯಾದಿಂದ ಇಂಧನ ಖರೀದಿ ಮಾಡುತ್ತಿರುವ ದೇಶಗಳು ಮಾಸ್ಕೋಗೆ ಹಣಕಾಸು ನೆರವು ನೀಡುತ್ತಿರುವಂತೆಯೇ ಎಂಬ ವಾದವನ್ನು ಮುಂದುವರಿಸುತ್ತಿದೆ. ಆದರೆ ಭಾರತ ಈಗಾಗಲೇ ಟ್ರಂಪ್ ಆಡಳಿತದ ಸುಂಕ ನೀತಿಗಳ ಪರಿಣಾಮ ಅನುಭವಿಸಿದೆ. ಈ ವರ್ಷದ ಆರಂಭದಲ್ಲಿ, ಅಮೆರಿಕ ಭಾರತೀಯ ಉತ್ಪನ್ನಗಳ ಮೇಲೆ ಸುಂಕವನ್ನು ಶೇಕಡಾ 50 ರವರೆಗೆ ಹೆಚ್ಚಿಸಿದ್ದು, ಇದು ಜವಳಿಗಳಿಂದ ಔಷಧಗಳವರೆಗೆ ವ್ಯಾಪಕವಾಗಿ ಪರಿಣಾಮ ಬೀರಿದೆ.
ಇದಾದ ಬಳಿಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ರಂಪ್ ಹೇಳಿಕೆಗಳನ್ನು ತಿರಸ್ಕರಿಸಿ ಸ್ಪಷ್ಟನೆ ನೀಡಿದ್ದು, ದೇಶದ ಇಂಧನ ನೀತಿ ಸಂಪೂರ್ಣವಾಗಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ ಎಂದು ತಿಳಿಸಿದೆ.
“ಭಾರತ ತೈಲ ಮತ್ತು ಅನಿಲದ ಪ್ರಮುಖ ಆಮದುದಾರ. ಅಸ್ಥಿರ ಇಂಧನ ಪರಿಸ್ಥಿತಿಯಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ನಮ್ಮ ಆಮದು ನೀತಿಗಳೂ ಇದೇ ಆಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.


