ವಂಚನೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ದೋಷಿ ಎಂದು ಘೋಷಿಸಿದ ನಂತರ ಬಿಹಾರ ವಿಧಾನಸಭೆಯಿಂದ ಅನರ್ಹಗೊಂಡಿದ್ದ ಮಾಜಿ ಆರ್‌ಜೆಡಿ ನಾಯಕ ಅನಿಲ್ ಸಹಾನಿ ಬುಧವಾರ (ಅ.22) ಬಿಜೆಪಿ ಸೇರಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಸಹಾನಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
2012ರಲ್ಲಿ ಸಹಾನಿ ರಾಜ್ಯಸಭಾ ಸಂಸದರಾಗಿದ್ದಾಗ, ಪ್ರಯಾಣ ಮಾಡದೆಯೇ ರಜೆ ಪ್ರಯಾಣ ರಿಯಾಯಿತಿ ಪಡೆಯಲು ನಕಲಿ ವಿಮಾನ ಟಿಕೆಟ್‌ಗಳನ್ನು ಸಲ್ಲಿಸಿದ್ದ ಪ್ರಕರಣದಲ್ಲಿ ದೆಹಲಿಯ ಸಿಬಿಐ ನ್ಯಾಯಾಲಯ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.
ಸಹಾನಿ ಅವರ ಪಕ್ಷಾಂತರ ಅವರ ತವರು ಜಿಲ್ಲೆ ಮುಝಫ್ಫರ್‌ಪುರದಲ್ಲಿ ಗಣನೀಯ ಪ್ರಮಾಣದಲ್ಲಿ ಇರುವ ಅತ್ಯಂತ ಹಿಂದುಳಿದ ವರ್ಗವಾದ ‘ನಿಶಾದ್’ ಸಮುದಾಯವನ್ನು ತಲುಪಲು ಬಿಜೆಪಿ ಮಾಡಿದ ಪ್ರಯತ್ನ ಎಂದು ಹೇಳಲಾಗ್ತಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ ಕುರ್ಹಾನಿಯಿಂದ ಸ್ಪರ್ಧಿಸಿದ್ದ ಸಹಾನಿ, ಬಿಜೆಪಿಯ ಕೇದಾರ್ ಗುಪ್ತಾ ಅವರನ್ನು 900ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿದ್ದರು.
ಸಹಾನಿಯವರ ಅನರ್ಹತೆಯ ನಂತರ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಗೆದ್ದು ಸಚಿವರಾದರು.
‘ಉಪನಾಮದ ಕಾರಣಕ್ಕೆ ಸರ್ಫರಾಝ್ ಖಾನ್ ಆಯ್ಕೆಯಾಗಿಲ್ಲವೇ?’..ಗಂಭೀರ್ ವಿರುದ್ಧ ಶಮಾ ಮೊಹಮ್ಮದ್ ಆಕ್ರೋಶ


