ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರೂಪಿಸಲಾಗಿದೆ ಎನ್ನಲಾದ ರಾಷ್ಟ್ರೀಯ ಉಪಕ್ರಮ, ‘ಪಿಎಂಶ್ರೀ’ (Prime Minister’s Schools for Rising India scheme) ಯೋಜನೆಯ ತಿಳುವಳಿಕೆ ಪತ್ರಕ್ಕೆ (ಎಂಒಯು) ಕೇರಳ ಸರ್ಕಾರ ಗುರುವಾರ (ಅ.24) ಸಹಿ ಹಾಕಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ಎರಡನೇ ಅತಿದೊಡ್ಡ ಮಿತ್ರಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ತೀವ್ರ ವಿರೋಧದ ನಡುವೆಯೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದೊಂದಿಗಿನ ತಿಳುವಳಿಕೆ ಪತ್ರಕ್ಕೆ ಕೇರಳ ಸರ್ಕಾರದ ಪರವಾಗಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ.
ಕೇಂದ್ರ ಸರ್ಕಾರದ ವಿಶಾಲ ಶಿಕ್ಷಣ ಸುಧಾರಣಾ ಕಾರ್ಯಸೂಚಿಯ ಭಾಗವೆಂದು ಹೇಳಲಾಗುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಹಲವಾರು ನಿಬಂಧನೆಗಳಿಗೆ ಆಕ್ಷೇಪಣೆಗಳನ್ನು ಉಲ್ಲೇಖಿಸಿ ಎಲ್‌ಡಿಎಫ್ ಸರ್ಕಾರವು ಈ ಹಿಂದೆ ‘ಪಿಎಂಶ್ರೀ’ ಯೋಜನೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು. ಸರ್ಕಾರ ಈ ನಿಲುವು ರಾಜ್ಯಕ್ಕೆ ಕೇಂದ್ರ ಶಿಕ್ಷಣ ನಿಧಿ ಪಡೆಯಲು ಅಡ್ಡಿಯುಂಟುಮಾಡಿದೆ. ಹಾಗಾಗಿ ಸರ್ಕಾರ ನಿರ್ಧಾರ ಬದಲಿಸಿದೆ ಎಂದು ವರದಿಯಾಗಿದೆ.
‘ಪಿಎಂಶ್ರೀ’ ಯೋಜನೆಯನ್ನು ಒಪ್ಪಿಕೊಳ್ಳದ ಕಾರಣ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಾ ಕೇರಳ (ಎಸ್‌ಎಸ್‌ಕೆ) ಕಾರ್ಯಕ್ರಮದಡಿ ನೀಡಬೇಕಿದ್ದ ಸುಮಾರು 1,500 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ. ಈಗ ಯೋಜನೆಗೆ ಸಹಿ ಹಾಕಿರುವ ಹಿನ್ನೆಲೆ, ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರು ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ, “ಸರ್ಕಾರದ ನಿರ್ಧಾರವು ರಾಜ್ಯಕ್ಕೆ ಕೇಂದ್ರದಿಂದ ಗಣನೀಯ ನಿಧಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಕೇಂದ್ರ ಬಿಡುಗಡೆ ಮಾಡುವ ಅನುದಾನದಲ್ಲಿ ವಿವಿಧ ಶಿಕ್ಷಣ ಯೋಜನೆಗಳ ಅಡಿಯಲ್ಲಿ ನೀಡಲು ಬಾಕಿ ಇರುವ ಸರಿಸುಮಾರು 1,500 ಕೋಟಿ ರೂ. ಸೇರಿವೆ ಎಂದು ಹೇಳಿದ್ದಾರೆ.
ಈ ನಿಧಿಯು ಪಠ್ಯಪುಸ್ತಕ ಮುದ್ರಣ, ಪ್ರಶ್ನೆಪತ್ರಿಕೆ ತಯಾರಿಕೆ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಕರಾವಳಿಯ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರಯಾಣ, ಊಟ ಮತ್ತು ಹಾಸ್ಟೆಲ್ ಸೌಲಭ್ಯಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಆದಾಗ್ಯೂ, ಕ್ಯಾಬಿನೆಟ್ ಮಟ್ಟದ ಪೂರ್ವ ಚರ್ಚೆಗಳಿಲ್ಲದೆ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದನ್ನು ಸಿಪಿಐ ವಿರೋಧಿಸಿದೆ. ಈ ಕುರಿತು ಮಾತನಾಡಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ, “ನಮ್ಮ ಪಕ್ಷವು ಎನ್ಇಪಿಯನ್ನು ವಿರೋಧಿಸುತ್ತಲೇ ಬಂದಿದೆ. ಎನ್‌ಇಪಿ ಆರ್‌ಎಸ್‌ಎಸ್‌ನ ಅಜೆಂಡಾ” ಎಂದಿದ್ದಾರೆ. ಸರ್ಕಾರ ಎಂಒಯುಗೆ ಸಹಿ ಹಾಕಿರುವ ಬಗ್ಗೆ ಕೇಳಿದ್ದಕ್ಕೆ, “ನಮ್ಮ ಪಕ್ಷ ಸದ್ಯಕ್ಕೆ ಏನೂ ಹೇಳುವುದಿಲ್ಲ” ಎಂದಿದ್ದಾರೆ.
“ಪಿಎಂ ಶ್ರೀ’ ಯೋಜನೆಗೆ ಸಹಿ ಹಾಕುವ ಮೂಲಕ ಪಿಣರಾಯಿ ಸರ್ಕಾರವು ಸಾವರ್ಕರ್ ಮಾಡಿದ್ದಕ್ಕಿಂತ ದೊಡ್ಡ ದ್ರೋಹವನ್ನು ಮಾಡಿದೆ. ಕೇರಳದ ಶಿಕ್ಷಣ ಕ್ಷೇತ್ರವನ್ನು ಆರ್‌ಎಸ್‌ಎಸ್‌ಗೆ ಮಾರಿದ ಪಿಣರಾಯಿ ಅವರಿಗೂ ಸಾವರ್ಕರ್‌ಗೂ ಏನು ವ್ಯತ್ಯಾಸ?” ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಕೇರಳ ವಿದ್ಯಾರ್ಥಿ ಒಕ್ಕೂಟದ (ಕೆಎಸ್‌ಯು) ರಾಜ್ಯ ಅಧ್ಯಕ್ಷ ಅಲೋಶಿಯಸ್ ಕ್ಸೇವಿಯರ್ ಪ್ರಶ್ನಿಸಿದ್ದಾರೆ.
“ಮುಂಬರುವ ದಿನಗಳಲ್ಲಿ, ಕೇರಳದ ಕಾಲೇಜುಗಳಲ್ಲಿ ಭವಿಷ್ಯದ ಪೀಳಿಗೆಗಳು ನಾಥೂರಾಮ್ ವಿನಾಯಕ್ ಗೋಡ್ಸೆ ಮತ್ತು ಗೋಲ್ವಾಲ್ಕರ್ ಅವರನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರೆಂದು ಅಧ್ಯಯನ ಮಾಡುವಂತೆ ಮಾಡಿದರೆ, ಅದಕ್ಕೆ ಸಿಪಿಎಂ ಮತ್ತು ‘ಪಿಣರಾಯ್-ಮೋದಿ’ ಸರ್ಕಾರ ಹೊಣೆಯಾಗಿರುತ್ತದೆ” ಎಂದು ಕ್ಸೇವಿಯರ್ ಹೇಳಿದ್ದಾರೆ.
ಫ್ರಾಟರ್ನಿಟಿ ಮೂವ್‌ಮೆಂಟ್ ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದು, ಕೇರಳದ ಶಿಕ್ಷಣ ಕ್ಷೇತ್ರವನ್ನು ಹಿಂದುತ್ವ ಶಕ್ತಿಗಳಿಗೆ ಹಸ್ತಾಂತರಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ತಿಳಿಸಿದೆ.
“ಕೇರಳದಲ್ಲಿ ಪಿಎಂ ಶ್ರೀ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಾವು ಅನುಮತಿಸುವುದಿಲ್ಲ” ಎಂದಿದೆ.
ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಬಿಜೆಪಿಯೇತರ ಆಡಳಿತದ ರಾಜ್ಯಗಳು ‘ಪಿಎಂಶ್ರೀ’ ಯೋಜನೆಯನ್ನು ಇದುವರೆಗೆ ಒಪ್ಪಿಕೊಂಡಿಲ್ಲ. ಕೇರಳ ಕೂಡ ಈ ಪಟ್ಟಿಯಲ್ಲಿ ಇತ್ತು. ಆದರೆ, ಕೇರಳ ಈಗ ನಿಲುವು ಬದಲಿಸಿದೆ. ಪಿಎಂಶ್ರೀ ಯೋಜನೆಯು ವಿವಾದಾತ್ಮಕ ಎನ್‌ಇಪಿಯನ್ನು ಒತ್ತಾಯಪೂರ್ವಕವಾಗಿ ಹೇರುವ ಪ್ರಯತ್ನವಾಗಿದೆ ಎಂದು ರಾಜ್ಯಗಳು ಆರೋಪಿಸಿವೆ. ಕೇಂದ್ರ ಸರ್ಕಾರ ಪಿಎಂಶ್ರೀ ಯೋಜನೆಯನ್ನು ಒಪ್ಪಿಕೊಳ್ಳದ ರಾಜ್ಯಗಳ ಶಿಕ್ಷಣ ನಿಧಿಯನ್ನು ತಡೆಹಿಡಿದಿದೆ.
‘ಬಿಜೆಪಿಯಿಂದ ಮುಂಬೈ ರಕ್ಷಿಸಲು ಕೈಜೋಡಿಸಿ..’; ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿದ ಶಿವಸೇನೆ ಸಂಸದ ಸಂಜಯ್ ರಾವತ್


