ಆನೆ ದಂತ ಪ್ರಕರಣದಲ್ಲಿ ನಟ ಮೋಹನ್‌ಲಾಲ್ ಮತ್ತು ಕೇರಳ ಸರ್ಕಾರಕ್ಕೆ ಕಾನೂನಾತ್ಮಕ ಹಿನ್ನಡೆಯಾಗಿದೆ. ಮೋಹನ್‌ಲಾಲ್‌ರ ಆನೆ ದಂತ ಸಂಗ್ರಹವನ್ನು ಕಾನೂನುಬದ್ಧಗೊಳಿಸಿದ್ದ ಕೇರಳ ಸರ್ಕಾರದ ಆದೇಶವನ್ನು ಹೈಕೋರ್ಟ್ ಶುಕ್ರವಾರ (ಅ.24) ರದ್ದುಗೊಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೋಹನ್‌ಲಾಲ್ ಪರ ವಕೀಲರು, “ಇದು ಕೇವಲ ತಾಂತ್ರಿಕ ಸಮಸ್ಯೆಯಷ್ಟೇ” ಎಂದಿದ್ದಾರೆ.
ದಂತ ಹೊಂದಲು ಮೋಹನ್‌ಲಾಲ್ ಅವರಿಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದುಗೊಳಿಸಿರುವ ಹೈಕೋರ್ಟ್, ನೆಲದ ಕಾನೂನಿನ ಕಾರ್ಯವಿಧಾನಗಳ ಅನುಸಾರ ಹೊಸ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೋಹನ್‌ಲಾಲ್ ಅವರ ದಂತ ಸಂಗ್ರಹವನ್ನು ಕ್ರಮಬದ್ಧಗೊಳಿಸಿದ್ದ 2015ರ ಕೇರಳ ಸರ್ಕಾರದ ಆದೇಶವು ಕಾರ್ಯವಿಧಾನದ ಲೋಪಗಳಿಂದ ಕೂಡಿದೆ ಮತ್ತು ಅಧಿಕೃತ ಗೆಜೆಟ್‌ನಲ್ಲಿ ಎಂದಿಗೂ ಪ್ರಕಟವಾಗದ ಕಾರಣ ಅದು ಅಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸರ್ಕಾರ ದಂತ ಹೊಂದುವುದನ್ನು ಕಾನೂನುಬದ್ಧಗೊಳಿಸುವ ಕ್ರಮವು ಶಾಸನಬದ್ಧ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದಿದೆ.
ಈ ಪ್ರಕರಣವು ಡಿಸೆಂಬರ್ 21, 2011ರಂದು ಆದಾಯ ತೆರಿಗೆ ಇಲಾಖೆಯು ಕೊಚ್ಚಿಯ ತೇವಾರದಲ್ಲಿರುವ ಮೋಹನ್‌ಲಾಲ್ ಅವರ ಮನೆ ಮೇಲೆ ದಾಳಿ ನಡೆಸಿ ಎರಡು ಜೋಡಿ ದಂತಗಳನ್ನು ಪತ್ತೆ ಮಾಡಿರುವುದಕ್ಕೆ ಸಂಬಂಧಿಸಿದೆ. ದಾಳಿಯ ನಂತರ, ಅರಣ್ಯ ಇಲಾಖೆಯು ಅಕ್ರಮವಾಗಿ ದಂತ ಹೊಂದಿದ್ದಕ್ಕಾಗಿ ಮೋಹನ್‌ಲಾಲ್ ವಿರುದ್ದ ಪ್ರಕರಣ ದಾಖಲಿಸಿತ್ತು.
2015ರಲ್ಲಿ ಸರ್ಕಾರ ಈ ಪ್ರಕರಣವನ್ನು ಹಿಂಪಡೆದಾಗ ವಿಷಯ ಮತ್ತೆ ಮುನ್ನೆಲೆಗೆ ಬಂದಿತ್ತು. ನಂತರ ಪೆರುಂಬವೂರ್ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿತ್ತು.
ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೋಹನ್‌ಲಾಲ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ, ಜೇಮ್ಸ್ ಮ್ಯಾಥ್ಯೂ ಎಂಬ ವ್ಯಕ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆನೆ ದಂತಗಳನ್ನು ಹೊಂದಿದ್ದಕ್ಕಾಗಿ ಮೊಹನ್‌ಲಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಈ ಹಿಂದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ಅವರಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ವಿಚಾರಣಾ ನ್ಯಾಯಾಲಯ ಸೂಚಿಸಿತ್ತು. ಸರ್ಕಾರದ ಪ್ರಕರಣ ಹಿಂತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿಲ್ಲ ಎಂದು ಹೇಳಿತ್ತು.
ಹೈಕೋರ್ಟ್ ಆರಂಭದಲ್ಲಿ ಮೋಹನ್‌ಲಾಲ್ ವಿರುದ್ದದ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನಂತರ ವಿಚಾರಣೆ ಮುಂದುವರಿಸಿ, ಇದೀಗ ತೀರ್ಪು ಪ್ರಕಟಿಸಿದೆ. ಈ ತೀರ್ಪಿನ ಮೂಲಕ ವನ್ಯಜೀವಿ ರಕ್ಷಣೆ ಮತ್ತು ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸೂಕ್ತ ಪ್ರಕ್ರಿಯೆಯ ಅಗತ್ಯವನ್ನು ಹೈಕೋರ್ಟ್ ಪುನರುಚ್ಚರಿಸಿದೆ.
ಹೈಕೋರ್ಟ್ ತೀರ್ಪು ಮೋಹನ್‌ಲಾಲ್ ದಂತ ಹೊಂದಿರುವ ಪ್ರಕರಣವನ್ನು ಮತ್ತೆ ತೆರೆಯಲಿದೆ. ರಾಜ್ಯ ಸರ್ಕಾರ ತನ್ನ ಹಿಂದಿನ ನಿರ್ಧಾರಗಳಲ್ಲಿನ ಕಾರ್ಯವಿಧಾನದ ತಪ್ಪುಗಳನ್ನು ಸರಿಪಡಿಸಲು ಒತ್ತಡ ಹೇರುತ್ತದೆ.
ಮುಂದಿನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ; ನ.3 ರಂದು ಬಿ.ಆರ್. ಗವಾಯಿ ನಿವೃತ್ತಿ


