ಕೇರಳದ ಸಚಿವಾಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ‘ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾಗಳು)’ ನವೆಂಬರ್ 1ರಂದು ಕೇರಳವನ್ನು ‘ತೀವ್ರ ಬಡತನ ಮುಕ್ತ’ ರಾಜ್ಯವೆಂದು ಘೋಷಿಸಲು ರಾಜ್ಯ ಸರ್ಕಾರ ಆಯೋಜಿಸಿರುವ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಮತ್ತು ಕಮಲ್ ಹಾಸನ್ ಅವರನ್ನು ವಿನಂತಿಸಿದೆ.
“ದಿನಕ್ಕೆ 233 ರೂಪಾಯಿಯಲ್ಲಿ ಬದುಕುತ್ತಿರುವ 26,125 ಆಶಾ ಕಾರ್ಯರ್ತೆಯರು ಅತ್ಯಂತ ಬಡವರಲ್ಲಿ ಸೇರಿದ್ದಾರೆ. ನಾವು ದುಃಖದಲ್ಲಿ ಬದುಕುತ್ತಿರುವಾಗ ಕೇರಳವನ್ನು ತೀವ್ರ ಬಡತನ ಮುಕ್ತ ಎಂದು ಘೋಷಿಸಲು ಸಾಧ್ಯವಿಲ್ಲ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಟರು ಉದ್ದೇಶಪೂರ್ವಕವಾಗಿ ಆ ಸುಳ್ಳನ್ನು ಪ್ರಚಾರ ಮಾಡುವ ಭಾಗವಾಗುತ್ತಾರೆ. ಆದ್ದರಿಂದ, ಪ್ರೀತಿ ಮತ್ತು ಗೌರವದಿಂದ ಕೇರಳದ ಬಡ ಆಶಾ ಕಾರ್ಯಕರ್ತೆಯರಾದ ನಾವು ಸರ್ಕಾರದ ಬಡತನ ಮುಕ್ತ ಘೋಷಣೆ ಸಮಾರಂಭದಿಂದ ಹಿಂದೆ ಸರಿಯುವಂತೆ ವಿನಮ್ರವಾಗಿ ವಿನಂತಿಸುತ್ತೇವೆ” ಎಂದು ಆಶಾ ಕಾರ್ಯಕರ್ತೆಯ ಒಕ್ಕೂಟ ಬಹಿರಂಗ ಪತ್ರದಲ್ಲಿ ಹೇಳಿದೆ.
ನವೆಂಬರ್ 1ರಂದು ಕೇರಳವನ್ನು ತೀವ್ರ ಬಡತನದಿಂದ ಮುಕ್ತಗೊಂಡ ದೇಶದ ಮೊದಲ ರಾಜ್ಯವೆಂದು ಅಧಿಕೃತವಾಗಿ ಘೋಷಿಸಲು ಸರ್ಕಾರ ಸಿದ್ದತೆ ನಡೆಸಿದೆ. ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ಕೇರಳ ಪಿರವಿ ದಿನಾಚರಣೆಯ (ರಾಜ್ಯೋತ್ಸವ) ಜೊತೆಗೆ ಈ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಸರ್ಕಾರವು ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಹಾಗೂ ನಟ-ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.
ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬದಲು ನಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಬಹಿರಂಗ ಪತ್ರದಲ್ಲಿ ನಟರಿಗೆ ಮನವಿ ಮಾಡಿದ್ದಾರೆ.
“ದಯವಿಟ್ಟು ನಮ್ಮನ್ನು ಭೇಟಿ ಮಾಡಿ, ಸಚಿವಾಲಯದ ಮುಂದೆ ಇರುವ ಆಶಾ ಯೋಧರೇ ಮೂರು ಹೊತ್ತು ಊಟ ಮಾಡಲು ಸಾಧ್ಯವಾಗದವರು, ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗದವರು, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದವರು, ಸಾಲದಲ್ಲಿ ಮುಳುಗಿರುವವರು. ನಮ್ಮ ಅಲ್ಪ ವೇತನವನ್ನು ಹೆಚ್ಚಿಸದೆ ಕೇರಳವನ್ನು ತೀವ್ರ ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸುವುದು ದೊಡ್ಡ ಸುಳ್ಳು, ಸರ್ಕಾರದ ವಂಚನೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಕೇರಳ ಆಶಾ ಆರೋಗ್ಯ ಕಾರ್ಯಕರ್ತರ ಸಂಘ (ಕೆಎಹೆಚ್‌ಡಬ್ಲ್ಯುಎ) ನೇತೃತ್ವದಲ್ಲಿ ಆಶಾ ಕಾರ್ಯಕರ್ತರು ಈ ವರ್ಷದ ಆರಂಭದಿಂದಲೂ ರಾಜ್ಯ ಸಚಿವಾಲಯದ ಹೊರಗೆ ಧರಣಿ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳಲ್ಲಿ ಗೌರವಧನ ಹೆಚ್ಚಳ ಮತ್ತು ನಿವೃತ್ತಿ ನಂತರದ ಸೌಲಭ್ಯಗಳು ಸೇರಿವೆ.
ಅಕ್ಟೋಬರ್ ಮೂರನೇ ವಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ್ದಾಗ ಅಶಾಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದರು. ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯತ್ತ ಮೆರವಣಿಗೆ ಕೈಗೊಂಡಿದ್ದರು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದು, ಅನೇಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದರು.


