ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಶಿಫಾ ಉರ್ ರೆಹಮಾನ್ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಅರ್ಜಿದಾರರು ದೀರ್ಘ ಜೈಲುವಾಸದ ಆಧಾರದ ಮೇಲೆ ‘ವಿಕ್ಟಿಮ್ ಕಾರ್ಡ್’ ಬಳಸಲು ಪ್ರಯತ್ನಿಸುತ್ತಿದ್ದಾರೆ. ವಿಚಾರಣೆ ವಿಳಂಬವಾಗಲು ಅವರೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆ ವಿಳಂಬದ ಆಧಾರದಲ್ಲಿ ಜಾಮೀನು ನೀಡಲು ಯಾವುದೇ ಕಾರಣಗಳಿಲ್ಲ. ವಿಚಾರಣೆ ಆರಂಭವಾಗುವುದನ್ನು ಅರ್ಜಿದಾರರು ಉದ್ದೇಶಪೂರ್ವಕವಾಗಿ ತಡೆಯುತ್ತಿದ್ದಾರೆ ಎಂದಿದ್ದಾರೆ.
ಅರ್ಜಿದಾರರ ಪ್ರಯತ್ನವು ಭಾರತಾದ್ಯಂತ ಸಶಸ್ತ್ರ ದಂಗೆಯನ್ನು ಪ್ರಚೋದಿಸುವುದಾಗಿತ್ತು
ಆರೋಪಿಗಳ ನಡವಳಿಕೆ, ಅವರ ವಿರುದ್ಧ ಲಭ್ಯವಿರುವ ನಿರಾಕರಿಸಲಾಗದ ಮತ್ತು ಸ್ಪಷ್ಟವಾದ ಸಾಕ್ಷ್ಯಗಳು ಅವರು ನ್ಯಾಯಾಲಯದಿಂದ ಯಾವುದೇ ಜಾಮೀನು ಪರಿಹಾರವನ್ನು ಪಡೆಯಲು ಅನರ್ಹರು ಎಂಬುವುದನ್ನು ಸೂಚಿಸುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
“ಅರ್ಜಿದಾರರು ರೂಪಿಸಿದ, ಪೋಷಿಸಿದ ಮತ್ತು ಕಾರ್ಯಗತಗೊಳಿಸಿದ ಪಿತೂರಿಯು ಕೋಮು ಸಾಮರಸ್ಯವನ್ನು ನಾಶಮಾಡುವ ಮೂಲಕ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹೃದಯಭಾಗಕ್ಕೆ ಹೊಡೆತ ನೀಡುವುದಾಗಿತ್ತು. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಸಶಸ್ತ್ರ ದಂಗೆಯ ಮಟ್ಟಿಗೆ ಜನಸಮೂಹವನ್ನು ಪ್ರಚೋದಿಸುವುದಾಗಿತ್ತು” ಎಂದು ಪೊಲೀಸರ ಅಫಿಡವಿಟ್‌ನಲ್ಲಿಆರೋಪಿಸಲಾಗಿದೆ.
ನಾವು ಸಂಗ್ರಹಿಸಿದ ಸಾಕ್ಷ್ಯಗಳು ಅರ್ಜಿದಾರರು ಭಾರತಾದ್ಯಂತ ಇಂತಹ ಪಿತೂರಿಯನ್ನು ಕಾರ್ಯಗತಗೊಳಿಸಲು ಬಯಸಿದ್ದರು ಎಂದು ಸೂಚಿಸುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಶಿಫಾ ಉರ್ ರೆಹಮಾನ್ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಯಾಗಿ ಅಫಿಡವಿಟ್‌ಗಳನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಬೇಕೆಂಬ ದೆಹಲಿ ಪೊಲೀಸರ ಮನವಿಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 27ರಂದು ತಿರಸ್ಕರಿಸಿತ್ತು.
ಸಾಕಷ್ಟು ಸಮಯ ನೀಡಲಾಗಿದೆ ಎಂದು ಹೇಳಿದ್ದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ (ಅ.31) ಮುಂದೂಡಿ, ಈ ಮಧ್ಯೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದಾರೆ.
ರವೀಂದ್ರನಾಥ ಟ್ಯಾಗೋರ್‌ರ ‘ಅಮರ್ ಸೋನಾರ್ ಬಾಂಗ್ಲಾ’ ಗೀತೆ ಹಾಡಿದ ಕಾಂಗ್ರೆಸ್ ಮುಖಂಡ: ಕ್ರಮಕ್ಕೆ ಸೂಚಿಸಿದ ಅಸ್ಸಾಂ ಸಿಎಂ


