ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು, ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುವುದು ಮತ್ತು ರಾಜ್ಯಾದ್ಯಂತ ಮೂಲಸೌಕರ್ಯಗಳನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಮಾಡಿದೆ. ಈ ದಾಖಲೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಜಿತನ್ ರಾಮ್ ಮಾಂಝಿ ಮತ್ತು ಚಿರಾಗ್ ಪಾಸ್ವಾನ್ ಮತ್ತು ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರೊಂದಿಗೆ ಬಿಡುಗಡೆ ಮಾಡಿದರು.
ಬಿಜೆಪಿಯ ಬಿಹಾರ ಮುಖ್ಯಸ್ಥ ದಿಲೀಪ್ ಜೈಸ್ವಾಲ್ ಅವರು ಪ್ರಣಾಳಿಕೆಯನ್ನು “ಪ್ರಧಾನಿ ನರೇಂದ್ರ ಮೋದಿಯವರ ಭರವಸೆ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿಶ್ವಾಸ” ಎಂದು ಬಣ್ಣಿಸಿದ್ದಾರೆ. ಮೈತ್ರಿಕೂಟದ ಪಾಲುದಾರರು ಮಹಾಭಾರತದ ಪಾಂಡವರಂತೆ ಏಕತೆಯನ್ನು ಸಂಕೇತಿಸುತ್ತಾರೆ ಎಂದಿರುವ ಅವರು “ಬಿಹಾರದ ಜನರು ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಅವರ ಭರವಸೆಗಳನ್ನು ನಂಬುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ “ಬಿಹಾರದ ನಾಶಕ್ಕಾಗಿ” ಸಾರ್ವಜನಿಕರು “ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್” ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಈ ಮೈತ್ರಿಕೂಟದ ಪ್ರಣಾಳಿಕೆಯು ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಬೃಹತ್ ಹೂಡಿಕೆಗಳನ್ನು ಕೇಂದ್ರೀಕರಿಸುತ್ತದೆ.
ಎನ್‌ಡಿಎ ಪ್ರಮುಖ ಭರವಸೆಗಳು
- ಬಿಹಾರದಲ್ಲಿ 1 ಕೋಟಿಗೂ ಹೆಚ್ಚು ಸರ್ಕಾರಿ ಉದ್ಯೋಗ
- ಯುವಕರ ಕೌಶಲ್ಯವರ್ಧನೆಗಾಗಿ ಪ್ರತಿ ಜಿಲ್ಲೆಯಲ್ಲಿ ‘ಮೆಗಾ ಕೌಶಲ್ಯ ಕೇಂದ್ರ’ ಸ್ಥಾಪನೆ
- ತರಬೇತಿಯ ನಂತರ, ಪ್ರಪಂಚದಾದ್ಯಂತ ಬಿಹಾರದ ಯುವಜನರನ್ನು ಕೆಲಸಕ್ಕಾಗಿ ಕಳುಹಿಸುವುದು
- ಮಹಿಳೆಯರಿಗೆ 2 ಲಕ್ಷ ರೂ.ವರೆಗೆ ಆರ್ಥಿಕ ನೆರವು
- 1 ಕೋಟಿ ‘ಲಖ್ಪತಿ ದೀದಿಗಳು’ (1 ಲಕ್ಷ ರೂ. ಗಳಿಸುವ ಮಹಿಳೆಯರು) ಸೃಷ್ಟಿ ಮತ್ತು ಕೋಟ್ಯಾಧಿಪತಿಗಳಾಗಲು (1 ಕೋಟಿ ರೂ. ಗಳಿಸುವವರು) ‘ಮಿಷನ್ ಕರೋಡ್‌ಪತಿ’ ಯೋಜನೆ
- ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿಗಳು) 10 ಲಕ್ಷ ರೂ.ವರೆಗೆ ಆರ್ಥಿಕ ನೆರವು.
- ಅತ್ಯಂತ ಹಿಂದುಳಿದ ವರ್ಗಗಳಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಲು ಪ್ರತ್ಯೇಕ ಸಮಿತಿ
- ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳನ್ನು ಘೋಷಿಸಲಾಗುವುದು.


