ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ ನೀಡುವ ವಿಚಾರದ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕ ಭರವಸೆ ನಿಡಿದೆ ಎಂದು ಕರ್ನಾಟಕ ‘ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ’ ತಿಳಿಸಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಯೋಗದ ವತಿಯಿಂದ ಮೂರು ವಿಚಾರಗಳನ್ನು ಮಂಡಿಸಲಾಗಿದೆ. ಡಾ. ನಾಗಮೋಹನ್‌ದಾಸ್ ವರದಿ ಶಿಫಾರಸ್ಸಿನಂತೆ ಎ ಕೆಟಗರಿಯಲ್ಲಿ ಶೇ. 1 ಮೀಸಲಾತಿ ಜಾರಿ ಮಾಡುವುದು, 59 ಅಲೆಮಾರಿ ಜಾತಿಗಳಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕಡಗಡೆಗಣನೆಗೆ ಒಳಗಾಗಿರುವ ಸಮುದಾಯವನ್ನು ಸಮಗ್ರ ರೀತಿಯಲ್ಲಿ ಮೇಲೆತ್ತುವ ಸಲುವಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ನೀಡಬೇಕು ಸಮಿತಿಯ ಸರ್ಕಾರವನ್ನು ಒತ್ತಾಯಿಸಿತು.
ಈಗ ಸೃಷ್ಠಿಯಾಗಿರುವ ಇಕ್ಕಟ್ಟಿಗೆ ಕಾರಣಗಳೇನು ಮತ್ತು ಅದಕ್ಕೆ ಪರಿಹಾರಗಳೇನು ಎನ್ನುವುದರ ಕುರಿತೂ ಸರ್ಕಾರದ ಮುಂದೆ ನಿಯೋಗದ ವತಿಯಿಂದ ಅಸ್ಫೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದ ಪರವಾಗಿ ಮುಖಂಡರಾದ ಶೇಷಪ್ಪರ ಮತ್ತು ಅಲೆಮಾರಿ ಸಮುದಾಯಗಳ ಪರವಾಗಿ ಗಟ್ಟಿಯಾಗಿ ನಿಂತು ಹೋರಾಟ ಮಾಡುತ್ತಿರುವ ಸಮಾಜಿಕ ಹೋರಾಟಗಾರರಾದ ನೂರ್ ಶ್ರೀಧರ್ ಅವರು ವಿಷಯ ಮಂಡಿಸಿದರು.
ಮೂರು ವಿಚಾರಗಳನ್ನು ಕುಲಂಕುಶವಾಗಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಸಿ ಮಹಾದೇವಪ್ಪ, “ಅಸ್ಫೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟವನ್ನು ಅಭಿನಂದಿಸಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಇಷ್ಟೆಲ್ಲಾ ನಡೆದಿದ್ದರೂ ನೀವು ಬಹಳ ಜವಾಬ್ದಾರಿಯಿಂದ ಹೋರಾಟವನ್ನು ನಡೆಸಿಕೊಂಡು ಬಂದಿದ್ದೀರಿ, ಸಮಸ್ಯೆನ್ನು ಪರಿಹರಿಸುವ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಿ ಸರ್ಕಾರಕ್ಕೂ ಸಲಹೆ ಕೊಡುತ್ತಿದ್ದೀರಿ, ನೀವು ಬಹಳ ತಾಳ್ಮೆ ಮತ್ತು ಸಂಯಮದಿಂದ ಈ ಹೋರಾಟವನ್ನು ನಡೆಸಿಕೊಂಡು ಬಂದಿದ್ದೀರಿ. ಅದಕ್ಕಾಗಿ ಸಮುದಾಯದವರಿಗೂ ಮತ್ತು ಸಮಿತಿಗೂ ಧನ್ಯವಾದಗಳು” ಎಂದರು.
“ನೀವು ಇಟ್ಟಿರುವ ಮೂರೂ ಹಕ್ಕೊತ್ತಾಯಗಳಿಗೆ ನಮ್ಮ ತಾತ್ವಿಕವಾದ ಒಪ್ಪಿಗೆ ಇದೆ. ನೀವು ಹೇಳಿದಹಾಗೆ ಖಂಡಿತವಾಗಿ ಪ್ರತ್ಯೇಕ ನಿಗಮವನ್ನು ಮಾಡಬಹುದು ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ನೀಡಬಹುದು; ನೀಡಲೇಬೇಕು ಅದು ನಮ್ಮ ಕರ್ತವ್ಯ ಅದನ್ನು ನಾವು ಖಂಡಿತ ಮಾಡುತ್ತೇವು. ಈಗ ಆಗಿರುವ ಒಳ ಮೀಸಲಾತಿ ವರ್ಗೀಕರಣವೂ ನಾವು ಸಂತಸದಿಂದ ಮಾಡಿದ್ದಲ್ಲ, ಈ ಸಮಸ್ಯೆನ್ನು ಬಗೆಹರಿಸಲು ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ನಾವು ಮಾಡಿದ ತಾತ್ಕಾಲಿಕ ತೀರ್ಮಾನವಾಗಿತ್ತು. ಅದನ್ನು ಶಾಶ್ವತ ಆಯೋಗದ ಮುಂದೆ ಇಟ್ಟು ಚರ್ಚಿಸಿ ಸೂಕ್ತವಾದ ಬದಲಾವಣೆ ಮಾಡಬೇಕು ಎನ್ನುವುದು ಸರ್ಕಾರದ ನಿಲುವಾಗಿತ್ತು. ಈಗ ನೀವು ಹೇಳಿದಂತೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ವಿಚಾರವನ್ನು ಹೇಗೆ ಬಗೆಹರಿಸಬೇಕು ಎನ್ನುವ ಮಾರ್ಗೋಪಾಯಗಳನ್ನು ಸೂಚಿಸಿದ್ದೀರಿ, ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ನಮಗೆ ಸ್ವಲ್ಪ ಕಾಲಾವಕಾಶ ಬೇಕು. ಸರ್ಕಾರದ ಮೇಲೆ ವಿಶ್ವಾಸ ಇಡಿ” ಎಂದು ನಿಯೋಗಕ್ಕೆ ಮನವಿ ಮನಾಡಿದರು.
“ಸರ್ಕಾರದ ನಿಲುವನ್ನು ಸ್ವಾಗತಿಸುತ್ತೇವೆ. ಆದರೆ, ಈ ಕೆಲಸ ಬಹಳ ತ್ವರಿತವಾಗಿ ಆಗಬೇಕು. ಈಗಿರುವ ಬಾಕಿ ಉದ್ಯೋಗಗಳನ್ನು ಭರ್ತಿ ಮಾಡಿ ನಂತರದಲ್ಲಿ ಇದನ್ನು ಜಾರಿ ಮಾಡಿದರೆ ಇದಕ್ಕೆ ಅರ್ಥ ಬರುವುದಿಲ್ಲ. ಇರುವ ಉದ್ಯೋಗಗಳು ಖಾಲಿಯಾಗಿರುತ್ತದೆ ಆಗ ಸಮುದಾಯಕ್ಕೆ ಏನು ಸಿಗುವುದಿಲ್ಲ. ಒಳಮೀಸಲಾತಿ ಜಾರಿಗೊಳಿಸುವುದಕ್ಕಿಂತ ಮೊದಲು ಅಲೆಮಾರಿಗಳಿಗೆ ಶೇ.1 ಮೀಸಲಾತಿ ಸಿಗಬೇಕು” ಎಂದು ನಿಯೋಗ ವಾದವನ್ನು ಸಿಎಂ ಮುಂದಿಟ್ಟರು.
ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, “ಖಂಡಿತವಾಗಿಯೂ ನಿಮ್ಮ ಆತಂಕವನ್ನು ಗಮನದಲ್ಲಿಟ್ಟುಕೊಂಡು ರೆಕ್ರ್ಯೂಟ್ಮೆಂಟ್ ಆಗೋದಕ್ಕಿಂತ ಮೊದಲೇ ಸಮಸ್ಯೆ ಬಗೆಹರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ” ಎಂದರು.
ಮತ್ತೊಮ್ಮೆ ಮಾತನಾಡಿದ ಮುಖ್ಯಮಂತ್ರಿಗಳು, “ದಯವಿಟ್ಟು ಸರ್ಕಾರದ ಮೇಲೆ ವಿಶ್ವಾಸ ಇಡಿ, ಹೈಕೋರ್ಟ್ ನಲ್ಲಿ ಹಾಕಿರುವ ಮೊಕದ್ದಮೆ ವಾಪಸ್ ಪಡೆದುಕೊಳ್ಳಿ, ನಾವು ಖಂಡಿತವಾಗಿಯೂ ಸಮುದಾಯವನ್ನು ಕೈ ಬಿಡದೆ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹೇಳಿದರು.
“ನಾವು ಇದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಆದರೆ ಸರ್ಕಾರದಿಂದ ನಮಗೆ ಸ್ಪಷ್ಟವಾದ ಖಚಿತವಾದ ಆದೇಶ ಬರಬೇಕು. ಅಲ್ಲಿಯತನಕ ನೀವು ಯಾವುದೇ ರೀತಿಯ ಉದ್ಯೋಗ ಭರ್ತಿ ಮಾಡಬಾರದು” ಎಂದು ಹೋರಾಟಗಾರರು ತಿಳಿಸಿದರು.
ಕೋರ್ಟಿನಲ್ಲಿ ಈ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕಾ? ಎಂದು ಚರ್ಚೆ ಮಾಡುವುದಕ್ಕೆ ಸಮಿತಿ ನಮ್ಮ ಸಂಬಂಧ ಪಟ್ಟ ವಕೀಲರು ಮತ್ತು ಸರ್ಕಾರಿ ವಕೀಲರು ಇವರಿಬ್ಬರ ಮಧ್ಯೆ ಸಮಲೋಚನೆ ಮಾಡಿ ಮ್ಯೂಚುಯಲ್ ಕಮಿಟ್ಮೆಂಟ್ ಮೇಲೆ ಈ ಸಮಸ್ಯೆಯನ್ನು ಶೇಕಡ ಒಂದರಷ್ಟು ಮೀಸಲಾತಿ ಕೊಡುವುದು ಜಾರಿಯಾಗಬೇಕು. ಮತ್ತೊಂದು ಕಡೆ ಕಾನೂನು ತೊಡಕನ್ನು ನಿವಾರಣೆ ಮಾಡಬೇಕು. ಅದಕ್ಕೆ ಇರುವಂತಹ ಸರಿಯಾದ ಮಾರ್ಗವೇನು? ಎನ್ನುವುದರ ಬಗ್ಗೆ ಸರ್ಕಾರಿ ವಕೀಲರ ಜೊತೆಗೂ ಚರ್ಚೆ ಮಾಡಿ, ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಸಮಿತಿ ತೀರ್ಮಾನ ಮಾಡಿದೆ.

ಒಟ್ಟಿನಲ್ಲಿ ಇದು ಅಲೆಮಾರಿ ಸಮುದಾಯಕ್ಕೆ ದಕ್ಕ ಅತಿ ದೊಡ್ಡ ವಿಜಯವಾಗಿದೆ. ಚದುರು ಹೋಗಿದ್ದ ಸಮುದಾಯ ಒಟ್ಟುಗೂಡಿ ದೊಡ್ಡ ಹೋರಾಟ ಮಾಡಿ, ಡೆಲ್ಲಿ ತನಕ ಹೋಗಿ ಮತ್ತೆ ಬಂದು ಸರ್ಕಾರಕ್ಕೆ ಮನವರಿಕೆ ಮಾಡುವುದರಲ್ಲಿ ಸಮುದಾಯ ಯಶಸ್ವಿಗೊಂಡಿದೆ. ಇದಕ್ಕಾಗಿ ದುಡಿದ ಸಮುದಾಯದ ಎಲ್ಲರಿಗೂ, ಸಮುದಾಯದ ಪರವಾಗಿ ಕೆಲಸ ಮಾಡಿದ ಇತರೆ ಒಳ ಮೀಸಲಾತಿ ಹೋರಾಟಗಾರರಿಗೂ, ಜನಪರ ಚಿಂತಕರಿಗೂ, ಕಲಾವಿದರು ಸಾಹಿತಿಗರಿಗೂ, ಮಾಧ್ಯಮದವರಿಗೂ ವಿಶೇಷ ಧನ್ಯವಾದಗಳನ್ನು ಹೇಳಬಯಸುತ್ತದೆ ಅಲೆಮಾರಿ ಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ.
ಇದರ ಮೂಲಕ ಫ್ರೀಡಂಪಾರ್ಕನಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತೇವೆ. ಸರಕಾರ ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿಯನ್ನು ಪ್ರಾರಂಭ ಮಾಡುವುದಕ್ಕೂ ಮೊದಲು ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತದೆಂದು ನಂಬುತ್ತೇವೆ. ಕನಿಷ್ಠ ಚಳಿಗಾಳಿ ಅಧಿವೇಶನಕ್ಕಿಂದ ಮೊದಲು ಈ ಸಮಸ್ಯೆಗೆ ಸರ್ಕಾರ ಪರಿಹಾರ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ. ಒಂದು ವೇಳೆ ನಮ್ಮ ನಿರೀಕ್ಷೆಗೂ ಮೀರಿ ಮತ್ತೆ ನಮ್ಮ ಸಮಸ್ಯೆ ಬಗೆಹರಿಸದೆ ಉದ್ಯೋಗ ಬರ್ತಿ ಮಾಡಲು ಸರ್ಕಾರ ಮುಂದಾದರೆ ಖಂಡಿತವಾಗಿಯೂ ನಮ್ಮ ಹಕ್ಕಿಗಾಗಿ ನಮ್ಮ ಸಮುದಾಯ ಮತ್ತೆ ಬೇದಿಗೆ ಇಳಿಯುವುದು ಖಚಿತವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
RSS ಪಥಸಂಚಲನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ: ಪ್ರಿಯಾಂಕ್ ಖರ್ಗೆ


