ಮಹಿಳಾ ಸಿಬ್ಬಂದಿಗಳು ತಮ್ಮ ‘ಮುಟ್ಟು’ ಸಾಬೀತು ಪಡಿಸಲು, ತಾವು ಧರಿಸಿರುವ ಸ್ಯಾನಿಟರಿ ಪ್ಯಾಡ್‌ನ ಫೋಟೋ ತೆಗೆದು, ತಂದು ತೋರಿಸುವಂತೆ ಕೇಳಲಾಗಿರುವ ಅಮಾನವೀಯ ಘಟನೆ ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿಶ್ವವಿದ್ಯಾಲಯದಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಸ್ಯಾನಿಟರಿ ಪ್ಯಾಡ್‌ಗಳ ಛಾಯಚಿತ್ರ ತೆಗೆಯುವಂತೆ ಅವರ ಮೇಲ್ವಿಚಾರಕರು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ.
ಅಕ್ಟೋಬರ್ 26 ರಂದು ಕ್ಯಾಂಪಸ್‌ನಲ್ಲಿ ಕೆಲ ಮಹಿಳೆಯರು ತಡವಾಗಿ ಕೆಲಸಕ್ಕೆ ಬಂದಿದ್ದರು. ಅವರನ್ನು ಮೇಲ್ವಿಚಾರಕರಾದ ವಿನೋದ್ ಮತ್ತು ಜೀತೇಂದ್ರ ನಿಂದಿಸಲಾರಂಭಿಸಿದ್ದರು. ಈ ವೇಳೆ, ಅವರು ಋತುಚಕ್ರದಲ್ಲಿದ್ದಾರೆ ಮತ್ತು ಸುಸ್ತಾಗಿದ್ದಾರೆಂದು ಇತರ ಸಿಬ್ಬಂದಿಗಳು ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಆದರೆ, ಅವರ ಮಾತನ್ನು ನಂಬದ ವಿನೋದ್ ಮತ್ತು ಜೀತೇಂದ್ರ, ‘ವಾಶ್‌ರೂಮ್‌ಗೆ ಹೋಗಿ, ತಮ್ಮ ಸ್ಯಾನಿಟರ್ ಪ್ಯಾಡ್‌ನ ಚಿತ್ರ ತೆಗೆದು, ತಮ್ಮ ಮುಟ್ಟನ್ನು ಸಾಬೀತುಪಡಿಸಿ’ ಎಂದು ಸೂಚಿಸಿದ್ದಾರೆ. ಅದನ್ನು ಪರಿಶೀಲಿಸುವಂತೆ ಮತ್ತೊಬ್ಬ ಮಹಿಳಾ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಮುಟ್ಟನ್ನು ದೃಢೀಕರಿಸಲು ಖಾಸಗಿ ಭಾಗಗಳ ಫೋಟೋಗಳನ್ನು ಪುರಾವೆಯಾಗಿ ಕ್ಲಿಕ್ಕಿಸಬೇಕೆಂದು ಮೇಲ್ವಿಚಾರಕರು ಒತ್ತಾಯಿಸಿದರು. ನಮ್ಮಲ್ಲಿ ಇಬ್ಬರು ಆ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದಾಗ, ನಮ್ಮನ್ನು ಮೇಲ್ವಿಚಾರಕರು ನಿಂದಿಸಿದರು. ವಜಾಗೊಳಿಸುವುದಾಗಿ ಬೆದರಿಕೆ ಹಾಕಿದರು” ಎಂದು ಸಂತ್ರಸ್ತ ಮಹಿಳೆಯರು ದೂರಿರುವುದಾಗಿ ವರದಿಯಾಗಿದೆ.
ಘಟನೆಯ ಬಗ್ಗೆ ತಿಳಿದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳು ಮತ್ತು ಉಳಿದ ಮಹಿಳಾ ಸಿಬ್ಬಂದಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವಾರ್ಸಿಟಿ ರಿಜಿಸ್ಟ್ರಾರ್ ಕೃಷ್ಣನ್ ಕಾಂತ್, “ಘಟನೆ ಬಗ್ಗೆ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಬಿಡಲಾಗುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
“ಇಬ್ಬರು ಮೇಲ್ವಿಚಾರಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಪಿಜಿಐಎಂಎಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರೋಷನ್ ಲಾಲ್ ತಿಳಿಸಿದ್ದಾರೆ.
“ಕೆಲಸದ ಸ್ಥಳದಲ್ಲಿ ಅಭದ್ರತೆ ಉಂಟುಮಾಡುವ ಯಾವುದೇ ಘಟನೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ. ಸುರಕ್ಷಿತ, ಗೌರವ ಹಾಗೂ ಸೂಕ್ಷ್ಮತೆಯುಳ್ಳ ಕೆಲಸದ ವಾತಾವರಣವನ್ನು ಒದಗಿಸುವು ನಮ್ಮ ಆದ್ಯತೆಯಾಗಿದೆ. ಯಾವುದೇ ರೀತಿಯ ಅನುಚಿತ ನಡವಳಿಕೆ ಅಥವಾ ದುಷ್ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ವಿಶ್ವವಿದ್ಯಾಲಯ ಹೇಳಿದೆ.


