ಸುರಕ್ಷತಾ ಸಾಧನಗಳಿಲ್ಲದೆ ಮ್ಯಾನ್ ಹೋಲ್ ಗೆ ಇಳಿದು, ವಿಷಕಾರಿ ಅನಿಲ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ಪ್ರಜ್ಞೆ ತಪ್ಪಿ, ಕುಸಿದ್ದು ಬಿದ್ದಿರುವ ಅಮಾನವೀಯ ಘಟನೆ ಅಕ್ಟೋಬರ್ 31ರಂದು, ಬೆಂಗಳೂರಿನ ನೀಲಸಂದ್ರದಲ್ಲಿ ನಡೆದಿದೆ.
ನೀಲಸಂದ್ರದ ಬಜಾರ್ ಸ್ಟ್ರೀಟ್‌ನಲ್ಲಿ ನಡೆದ ಈ ಆಘಾತಕಾರಿ ಘಟನೆಯಲ್ಲಿ, ಸುರಕ್ಷತಾ ಸಾಧನಗಳಿಲ್ಲದೆ ಸ್ವಚ್ಛಗೊಳಿಸುತ್ತಿದ್ದಾಗ ವಿಷಕಾರಿ ಅನಿಲದಿಂದಾಗಿ ಮೂವರು ಕಾರ್ಮಿಕರು ಮ್ಯಾನ್‌ಹೋಲ್‌ನೊಳಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಹಗ್ಗಗಳನ್ನು ಬಳಸಿ ಕಾರ್ಮಿಕರನ್ನು ಮೇಲಕ್ಕೆ ಕರೆತಂದು ಹಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀಲಸಂದ್ರದ ಬಜಾರ್ ಸ್ಟ್ರೀಟ್ ಬಳಿ ನಡೆದಿದೆ. ಕಾರ್ಮಿಕರು ಮುಚ್ಚಿಹೋಗಿದ್ದ ಮ್ಯಾನ್‌ಹೋಲ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, ಅವರಲ್ಲಿ ಒಬ್ಬ ಕಾರ್ಮಿಕ ವಿಷಕಾರಿ ಅನಿಲದಿಂದಾಗಿ ಉಸಿರುಗಟ್ಟಿ ಕುಸಿದು ಬಿದ್ದಿದ್ದಾರೆ. ಅವರು ಬೀಳುವುದನ್ನು ನೋಡಿದ, ಎರಡನೇ ಕಾರ್ಮಿಕ ಅವರನ್ನು ರಕ್ಷಿಸಲು ಮ್ಯಾನ್‌ಹೋಲ್‌ಗೆ ಪ್ರವೇಶಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಅವರೂ ಸಹ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ಇಬ್ಬರನ್ನೂ ಉಳಿಸುವ ಪ್ರಯತ್ನದಲ್ಲಿ ಮೂರನೇ ವ್ಯಕ್ತಿ ಹಗ್ಗವನ್ನು ಬಳಸಿ ಕೆಳಗೆ ಇಳಿದಿದ್ದಾರೆ. ಅವರೂ ಪ್ರಜ್ಞೆ ತಪ್ಪಿ ಕುಸಿದು ಬೀಳುವ ವೇಳೆಗೆ ಅಪಾಯವನ್ನು ಅರಿತ ಹತ್ತಿರದ ನಿವಾಸಿಗಳು ಕೂಡಲೇ ಮಧ್ಯಪ್ರವೇಶಿಸಿದ್ದಾರೆ.
ಸ್ಥಳೀಯರ ಸಮಯ ಪ್ರಜ್ಞೆಯಿಂದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರ್ಮಿಕರನ್ನು ತಕ್ಷಣ ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೂವರೂ ಅನಿಲ ಇನ್ಹಲೇಷನ್ ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.


