ನ್ಯಾಯಾಲಯ ರಕ್ಷಣೆ ಒದಗಿಸಿದ ಹೊರತಾಗಿಯೂ ವ್ಯಕ್ತಿಯೊಬ್ಬರನ್ನು ಬಂಧಿಸಿ, ಕಿರುಕುಳ ನೀಡಿದ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಕಂಧೈ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಸೂಚಿಸಿದೆ.
ಅರ್ಜಿದಾರರ ವಿರುದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯದ ಆದೇಶಿಸಿದ್ದರೂ, ಪೊಲೀಸ್ ಅಧಿಕಾರಿ ಅವರನ್ನು ಬಂಧಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, “ನಾನು ಯಾವ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸುವುದಿಲ್ಲ. ಇವತ್ತೇ ನಿನ್ನ ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲವನ್ನೂ ತೆಗೆದು ಹಾಕಿ ಬಿಡುತ್ತೇನೆ” ಎಂದು ನ್ಯಾಯಾಲವನ್ನು ಅವಮಾನಿಸಿದ್ದಾರೆ ಎಂಬುವುದಾಗಿ ಆರೋಪಿಸಲಾಗಿತ್ತು.
ಮಾರ್ಚ್ 28, 2025ರಂದು ನ್ಯಾಯಾಲಯದ ಅರ್ಜಿದಾರರಿಗೆ ರಕ್ಷಣೆ ಒದಗಿಸಿ ಆದೇಶ ನೀಡಿದ್ದರೂ, ಏಪ್ರಿಲ್ 23, 2025ರಂದು ಠಾಣಾಧಿಕಾರಿ ಗುಲಾಬ್ ಸಿಂಗ್ ಸೋಂಕರ್ ಅವರು ಅರ್ಜಿದಾರರನ್ನು ಅವರ ಕೆಲಸದ ಸ್ಥಳದಿಂದ ಎಳೆದೊಯ್ದು, ಬಂಧಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಆದೇಶದ ಪ್ರತಿಯನ್ನು ಹಾಜರುಪಡಿಸಿದರೂ, ಠಾಣಾಧಿಕಾರಿ ಸ್ಥಳೀಯ ಭಾಷೆಯಲ್ಲಿ ನಿಂದಿಸಿ, ನ್ಯಾಯಾಲಯದ ಆದೇಶಕ್ಕೆ ಅಗೌರವಿಸಿ ತೋರಿಸಿದ್ದಾರೆ. ಆದೇಶವನ್ನು ಪಾಲಿಸಲು ನಿರಾಕರಿಸಿದ್ದಾರೆ ಹೇಳಲಾಗಿತ್ತು.
ಈ ಹಿಂದೆ ನ್ಯಾಯಾಲಯವು ಉತ್ತರ ಪ್ರದೇಶ ಗೃಹ ಇಲಾಖೆಗೆ ಈ ವಿಷಯವನ್ನು ಎಡಿಜಿಪಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯ ಮೂಲಕ ತನಿಖೆ ನಡೆಸುವಂತೆ ನಿರ್ದೇಶಿಸಿತ್ತು.
ಸರ್ಕಾರದ ವಿಚಾರಣಾ ವರದಿಯು ಕೂಡ ಪೊಲೀಸ್ ಅಧಿಕಾರಿ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿದ್ದಾರೆ ಎಂದು ಹೇಳಿದೆ.
ಪೊಲೀಸ್ ಅಧಿಕಾರಿ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಹಾಗಾಗಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಸಮವಸ್ತ್ರ ಹಾಕಿಕೊಂಡು ನಡೆಸುವ ಇಂತಹ ಅಪರಾಧಗಳನ್ನು ಕ್ಷಮಿಸುವ ಪ್ರಶ್ನೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ.
ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಸರ್ಕಾರದ ಪರ ಸಹಾಯಕ ಅಡ್ವೊಕೇಟ್ ಜನರಲ್, “ವಿಚಾರಣಾ ವರದಿ ಸರ್ಕಾರಕ್ಕೆ ತಲುಪಿದೆ. ಅದರ ಆಧಾರರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದರು. ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಸರ್ಕಾರಕ್ಕೆ ಸಮಯ ನೀಡಿ ವಿಚಾರಣೆಯನ್ನು ನವೆಂಬರ್ 7ಕ್ಕೆ ನಿಗದಿ ಮಾಡಿದೆ.
ಸಾಮಾಜಿಕ ನ್ಯಾಯಕ್ಕಾಗಿ ‘ಎಸ್ಐಆರ್’ ನಲ್ಲಿ ಜಾತಿ ಕಾಲಮ್ ಸೇರಿಸಿ: ಅಖಿಲೇಶ್ ಯಾದವ್


