ಗುಜರಾತ್‌ನ ನರೋಲ್‌ನಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಅಂತರ್ಜಾತಿ ವಿವಾಹದಿಂದ ಕೋಪಗೊಂಡ ವಧುವಿನ ಕುಟುಂಬವು ಆಕೆಯ 60 ವರ್ಷದ ದಲಿತ ಮಾವನನ್ನು ಕೊಂದ ಆರೋಪವಿದೆ. ಪೊಲೀಸರು ಕೊಲೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದುವರೆಗೆ ಐವರನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ದಲಿತ ವ್ಯಕ್ತಿ ಸನ್ನಿಯೊಂದಿಗೆ ವಿವಾಹವಾದ ನಂತರ ವಧುವಿನ ಕುಟುಂಬವು ಕೋಪಗೊಂಡಿದೆ. ಗುರುವಾರ ಮಧ್ಯಾಹ್ನ, ಸನ್ನಿ ಅವರ ಅಣ್ಣ ಕೆಲಸಕ್ಕೆ ತೆರಳುತ್ತಿದ್ದ ತಮ್ಮ ಪೋಷಕರನ್ನು ಉಸ್ಮಾನ್‌ಪುರ ಮೆಟ್ರೋ ನಿಲ್ದಾಣದ ಬಳಿ ಬಿಟ್ಟಾಗ, ವಧುವಿನ ಸಂಬಂಧಿಕರು ಸೇರಿದಂತೆ ಆಕೆಯ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಸೋದರ ಮಾವ ಸ್ಥಳಕ್ಕೆ ಬಂದು ದಂಪತಿಗಳ ಮೇಲೆ ಕೋಲು ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದರು. ದಾಳಿಕೋರರು ಜಾತಿ ಆಧಾರಿತ ನಿಂದನೆ ಮಾಡಿದ ನಂತರ ಅವರನ್ನು ಕ್ರೂರವಾಗಿ ಥಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಲವು ದಾರಿಹೋಕರು ಮಧ್ಯಪ್ರವೇಶಿಸಿ ಗಾಯಗೊಂಡ ದಂಪತಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ, ಮನೆಗೆ ಹಿಂದಿರುಗಿದ ನಂತರ, ಬಲಿಪಶು ಭೈಲಾಲ್ ವಘೇಲಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅವರನ್ನು ಮಣಿನಗರದ ಎಲ್‌ಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ರಾಜು ಪರ್ಮಾರ್, ಮಹೇಶ್ ಪರ್ಮಾರ್ (ಚಿಕ್ಕಪ್ಪ), ಲಿಲಿ ಪರ್ಮಾರ್, ಕಲಾವತಿ ಪರ್ಮಾರ್, ಮಹೇಶ್ ಪರ್ಮಾರ್ (ಸೋದರ ಮಾವ) ಮತ್ತು ಪ್ರೇಮ್ ಪರ್ಮಾರ್ ಎಂದು ಗುರುತಿಸಲಾದ ಆರೋಪಿಗಳ ವಿರುದ್ಧ ಕೊಲೆ, ಹಲ್ಲೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ನರೋಲ್ ಪೊಲೀಸರು ತಿಳಿಸಿದ್ದಾರೆ. ಐವರನ್ನು ಬಂಧಿಸಲಾಗಿದೆ, ಆದರೆ ಜ್ಯೋತಿ ಎಂಬ ಒಬ್ಬ ಮಹಿಳೆ ಇನ್ನೂ ತಲೆಮರೆಸಿಕೊಂಡಿದ್ದಾಳೆ.
ಇನ್ಸ್‌ಪೆಕ್ಟರ್ ವಿ.ಜೆ. ಚಾವ್ಡಾ ಮಾತನಾಡಿ, “ತಮ್ಮ ಮಗಳು ದಲಿತ ವ್ಯಕ್ತಿಯೊಂದಿಗೆ ಮದುವೆಯಾದ ಕಾರಣ ಆರೋಪಿಗಳು ಕೋಪಗೊಂಡಿದ್ದರು. ತಮ್ಮ ಕೋಪ ತೀರಿಸಿಕೊಳ್ಳಲು ಅವರು ಜೀವ ತೆಗೆದುಕೊಂಡರು” ಎಂದು ಹೆಳಿದರು.
ಘಟನೆಗೆ ಮುಂಚೆಯೇ ವಧುವಿನ ಸಂಬಂಧಿಕರಿಂದ ಅವರಿಗೆ ಬೆದರಿಕೆಗಳು ಬರುತ್ತಿದ್ದವು ಎಂದು ಬಲಿಪಶುವಿನ ಕುಟುಂಬ ತಿಳಿಸಿದೆ. ತನಿಖೆ ನಡೆಯುತ್ತಿದೆ, ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ| ದೇವಸ್ಥಾನದಲ್ಲಿ ಕುಳಿತಿದ್ದ ದಲಿತ ವೃದ್ಧನ ಮೇಲೆ ಹಲ್ಲೆ; ಪಿಸ್ತೂಲ್‌ನಿಂದ ಬೆದರಿಕೆ


