ನಮಸ್ತೆ ಟ್ರಂಪ್‌ಗಾಗಿ ಗುಜರಾತಿನ ಅಹಮದಾಬಾದ್‌ನ ಅವ್ಯವಸ್ಥೆಗಳಿಗೆ, ಬಡತನಕ್ಕೆ, ಕಸದ ಕೊಂಪೆಗಳಿಗೆ ಟಾರ್ಪಲ್ ಹಾಕಿ ಮುಚ್ಚಿಟ್ಟಿದ್ದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್.ಅಶೋಕ್ ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಜಿ20 ಶೃಂಗಸಭೆಗಾಗಿ ದೆಹಲಿಯ ಬಡವರಿಗೆ ದಿಗ್ಬಂಧನ ವಿಧಿಸಿ, ಬಡವರನ್ನು, ಬಡತನವನ್ನು ಬಂಧನದಲ್ಲಿಟ್ಟಿದ್ದಂತಹ ದುಃಸ್ಥಿತಿ ಬೆಂಗಳೂರಿಗೆ ಬಂದಿಲ್ಲ. ಛತ್ ಪೂಜೆಗಾಗಿ ನರ್ಮದಾ ನದಿಯ ಪಕ್ಕದಲ್ಲಿ ಫಿಲ್ಟರ್ ನೀರಿನ ಕೊಳ ನಿರ್ಮಿಸಿ, ನರ್ಮದಾ ನದಿಯ ಅವ್ಯವಸ್ಥೆಯನ್ನು ಮರೆಮಾಚಿದಂತಹ ದುಃಸ್ಥಿತಿ ನಮಗೆ ಒದಗಿ ಬಂದಿಲ್ಲ” ಟೀಕಿಸಿದ್ದಾರೆ.
“ಬೆಂಗಳೂರಿನ ಬಗ್ಗೆ ಬಿಜೆಪಿಯವರಿಗೆ ಹೆಮ್ಮೆ ಎನಿಸಿದಿರಬಹುದು, ನಮಗೆ ಹೆಮ್ಮೆ ಇದೆ. ಬೆಂಗಳೂರಿನ ಮಹತ್ವದ ಬಗ್ಗೆ ಬಿಜೆಪಿಯವರಿಗೆ ಅರಿವಿಲ್ಲದಿರಬಹುದು, ಮರ್ಸಿಡಿಸ್ ಬೆಂಜ್‌ನ CEOಯಿಂದ ಹಿಡಿದು ದೇಶದ ಹೂಡಿಕೆದಾರರವರೆಗೂ ಅದರ ಅರಿವಿದೆ. ಜಾಗತಿಕ ಸ್ಟಾರ್ಟ್ ಅಪ್ ಎಕೊಸಿಸ್ಟಮ್ ಸೂಚ್ಯಾಂಕದಲ್ಲಿ ಬೆಂಗಳೂರು 14ನೇ ಸ್ಥಾನಕ್ಕೆ ಏರಿರುವುದು ನಮ್ಮ ಕಾರ್ಯವೈಖರಿಗೆ ಹಿಡಿದ ಕನ್ನಡಿ” ಎಂದು ತಿಳಿಸಿದ್ದಾರೆ.
“ಅಶೋಕ್ ಅವರು ಶಾಖೆಗೆ ಹೋಗಿ ದೊಣ್ಣೆ ಹಿಡಿಯದನ್ನು ಬಿಟ್ಟು ಜಗತ್ತಿನ ಆಗುಹೋಗುಗಳ ಬಗ್ಗೆ, ಬೆಂಗಳೂರಿನ ಹೆಗ್ಗಳಿಕೆಯ ಬಗ್ಗೆ ತಿಳಿಯುವ ಪ್ರಯತ್ನ ನಡೆಸಿದ್ದರೆ ಈ ರೀತಿಯ ಅಪ್ರಬುದ್ಧ ಹೇಳಿಕೆ ನೀಡುತ್ತಿರಲಿಲ್ಲ” ಎಂದು ಕುಟುಕಿದ್ದಾರೆ.
ಆರ್ ಅಶೋಕ್ ಹೇಳಿದ್ದೇನು?
“ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದಕ್ಕೆ ಸಂತೋಷ” ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದರು.
“ಈಗಲಾದರೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು, ಬೆಂಗಳೂರು ಟೆಕ್ ಸಮ್ಮಿಟ್ ಗೆ ಆಗಮಿಸುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ಗುಂಡಿ ಬಿದ್ದ, ಹೊಂಡ ತುಂಬಿದ, ಕಸದಿಂದ ತುಂಬಿ ತುಳುಕುವ ರಸ್ತೆಗಳನ್ನು ಸರಿಪಡಿಸಲು ಮನವಿ ಮಾಡುವರೇ” ಎಂದು ಪ್ರಶ್ನಿಸಿದ್ದರು.
“ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit) ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡುತ್ತದೆಯೇ? ಕಳೆದ 2.5 ವರ್ಷಗಳಿಂದ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯವನ್ನು ಹಾಳು ಮಾಡಿದೆ, ಟ್ರಾಫಿಕ್ ಸಮಸ್ಯೆ ಉಲ್ಬಣಗೊಳಿಸಿದೆ, ಹೂಡಿಕೆದಾರರನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ” ಎಂದು ಅಶೋಕ್ ಟೀಕಿಸಿದ್ದರು.
“ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಭಾಗಿಯಾಗಲು ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎನ್ನುವುದೇ ಜನರ ನಿರೀಕ್ಷೆ” ಎಂದು ಹೇಳಿದ್ದರು.


