ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆಯಿಂದ ಸೈಬರ್ ವಂಚಕರು 56 ಲಕ್ಷ ರೂ. ದೋಚಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಕೋಲ್ಕತಾದ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
2002-2006ರ ನಡುವೆ ಬ್ಯಾನರ್ಜಿ ಅಸನ್ಸೋಲ್ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದರು. ಈ ಸಂದರ್ಭ ಅವರು ಎಸ್‌ಬಿಐನ ವಿಧಾನಸಭೆ ಉಪಶಾಖೆಯಲ್ಲಿ ಖಾತೆಗಳನ್ನು ತೆರೆದಿದ್ದರು. ಬ್ಯಾನರ್ಜಿ ಅವರ ಶಾಸಕ ಭತ್ಯೆಯನ್ನು ಈ ಖಾತೆಯಲ್ಲಿ ಜಮಾ ಮಾಡಲಾಗಿತ್ತು.
ಈಗ ಶ್ರೀರಾಂಪೋರ್ ಸಂಸದರಾಗಿರುವ ಬ್ಯಾನರ್ಜಿ ಅವರ ಈ ಹಳೆಯ ಖಾತೆಯಲ್ಲಿ ಬಹಳ ದಿನಗಳಿಂದ ಯಾವುದೇ ವಹಿವಾಟು ನಡೆದಿಲ್ಲ. ಇದನ್ನು ಬ್ಯಾಂಕ್ ನಿಷ್ಕ್ರಿಯ ಖಾತೆ ಎಂದು ಪರಿಗಣಿಸಿದೆ. ವಂಚಕರು ವಂಚನೆ ನಡೆಸಲು ಈ ಖಾತೆಯನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೈಬರ್ ವಂಚಕರು ಸಂಸದ ಬ್ಯಾನರ್ಜಿ ಅವರ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳ ನಕಲಿ ಪ್ರತಿಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆಯ ಕೈವೈಸಿಯನ್ನು ನವೀಕರಿಸಿದ್ದಾರೆ. ಇದರ ಜೊತೆಗೆ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದಾರೆ. ಇದಾದ ಬಳಿಕ ವಂಚಕರು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಹಲವಾರು ಅಧಿಕೃತ ವಹಿವಾಟುಗಳನ್ನು ನಡೆಸಿ ಇಲ್ಲಿಯವರೆಗೆ ಅವರ ಖಾತೆಯಿಂದ ಒಟ್ಟು 56 ಲಕ್ಷ ರೂ. ದೋಚಿದ್ದಾರೆ ಎಂದು ತಿಳಿದು ಬಂದಿದೆ.


