ಗ್ವಾಲಿಯರ್ : ಕಳೆದ ತಿಂಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಭಿಂಡ್ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠ ಶುಕ್ರವಾರ ತಿರಸ್ಕರಿಸಿದೆ. ಕೆಲವು ಮೇಲ್ಜಾತಿಯ ಯುವಕರು ದಲಿತ ಯುವಕನನ್ನು ಅಪಹರಿಸಿ, ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ್ದ ಅಮಾನವೀಯ ಘಟನೆಯಿಂದ ಚಂಬಲ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಅದರ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ.
ಭಿಂಡ್ ಜಿಲ್ಲೆಯ ದಲಿತ ಯುವಕನೊಬ್ಬ, ಮೇಲ್ಜಾತಿಯ ವ್ಯಕ್ತಿಗಳ ಬೊಲೆರೋ ಗಾಡಿಯನ್ನು ಓಡಿಸಲು ನಿರಾಕರಿಸಿದ ಕಾರಣ ಆತನನ್ನು ಅಪಹರಿಸಿ, ಕಾಲುಗಳನ್ನ ಕಟ್ಟಿ, ಥಳಿಸಿ, ಆತನಿಗೆ ಮೂತ್ರ ಕುಡಿಸಿ ಅಮಾನವೀಯವಾಗಿ ಹಲ್ಲೆ ಮಾಡಲಾಗಿತ್ತು.
ಸೋನು ಬರುವಾ, ಅಲೋಕ್ ಶರ್ಮಾ ಮತ್ತು ಛೋಟು ಈ ಮೂವರು ಪ್ರಕರಣದ ಪ್ರಮುಖ ಆರೋಪಿಗಳು.
ದಲಿತ ಯುವಕನ ಮೇಲಾದ ಈ ಅಮಾನವೀಯ ದಾಳಿಯನ್ನು ಖಂಡಿಸಿ, ಆಜಾದ್ ಸಮಾಜ ಪಕ್ಷ ಮತ್ತು ಭೀಮ್ ಆರ್ಮಿಯಂತಹ ಗುಂಪುಗಳು ಆತನ ಬೆಂಬಲಕ್ಕೆ ನಿಂತವು, ಆದರೆ ಹಲವಾರು ಹಿಂದೂ ಸಂಘಟನೆಗಳು ಆರೋಪಗಳನ್ನು ಕಟ್ಟುಕಥೆ ಎಂದು ತಳ್ಳಿಹಾಕಿ, ಆರೋಪಿಗಳಿಗೆ ಬೆಂಬಲ ಸೂಚಿಸಿದ್ದವು.
ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಭಿಂಡ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹೊರಗೆ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು.
ನಂತರ ಆರೋಪಿಗಳು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು, ಆದರೆ ದಾಳಿಗೆ ಒಳಗಾಗಿದ್ದ ಯುವಕ ಈ ಮನವಿಯನ್ನು ಬಲವಾಗಿ ವಿರೋಧಿಸಿದರು. “ಜಾಮೀನು ನೀಡುವುದರಿಂದ ಇದೇ ರೀತಿಯ ಅಪರಾಧಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ಆರೋಪಿಗಳಿಗೆ ಧೈರ್ಯ ತುಂಬುತ್ತದೆ” ಎಂದು ಸಂತ್ರಸ್ತರ ಪರ ವಕೀಲ ಅನಿಲ್ ಕುಮಾರ್ ಜಾಟವ್ ನ್ಯಾಯಾಲಯದ ಮುಂದೆ ವಾದಿಸಿದರು. “ಇಂತಹ ಘಟನೆಗಳು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಜಾಮೀನು ನೀಡಿದರೆ, ಅಪರಾಧ ಕೃತ್ಯಗಳತ್ತ ಒಲವು ಹೊಂದಿರುವ ಇತರ ವ್ಯಕ್ತಿಗಳು ಈ ಅಪರಾಧಗಳನ್ನು ಪುನರಾವರ್ತಿಸಬಹುದು” ಎಂದು ಅವರು ಹೇಳಿದರು.
ವಾದಗಳನ್ನು ಪರಿಗಣಿಸಿದ ನಂತರ, ಹೈಕೋರ್ಟ್ ಜಾಮೀನು ಆಕ್ಷೇಪಣೆಯನ್ನು ಎತ್ತಿಹಿಡಿದು, ಆರೋಪಿಗಳ ಅರ್ಜಿಯನ್ನು ತಿರಸ್ಕರಿಸಿತು.


