ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ ‘ಭಗವದ್ಗೀತೆ’ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ.
ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ ಜೀವನವನ್ನು ನಡೆಸುವತ್ತ ಮಾರ್ಗದರ್ಶನ ನೀಡುವ ಗುರಿಯನ್ನು ಈ ಮೂಲಕ ಹೊಂದಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ರಾಜಾ ಬಾಬು ಸಿಂಗ್ ಸಮರ್ಥಿಸಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಭಗವದ್ಗೀತೆಯ ಪಾರಾಯಣ ಹೊಸದಾಗಿ ನೇಮಕಗೊಂಡ ಪೊಲೀಸರಲ್ಲಿ ಬುದ್ಧಿಮತ್ತೆಯ ಅಂಶ (ಐಕ್ಯೂ) ಮತ್ತು ಭಾವನಾತ್ಮಕ ಅಂಶ (ಇಕ್ಯೂ) ನಡುವಿನ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಭೋಪಾಲ್‌ನಲ್ಲಿ ಕರ್ತವ್ಯ ನಿರತ ಕಾನ್‌ಸ್ಟೆಬಲ್‌ಗಳಿನಿಂದ ಯುವ ವಿದ್ಯಾರ್ಥಿಯೊಬ್ಬ ಕೊಲ್ಲಲ್ಪಟ್ಟಿರುವಾಗ, ಭಗವದ್ಗೀತೆಯ ಅಧ್ಯಾಯಗಳನ್ನು ಓದುವುದು ಹೊಸದಾಗಿ ನೇಮಕಗೊಂಡ ಪೊಲೀಸರ ಜೀವನದ ಮೇಲೆ ಖಂಡಿತವಾಗಿಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಎಡಿಜಿ (ತರಬೇತಿ) ಶುಕ್ರವಾರ ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.
“ಗುರುವಾರದಿಂದ ಪ್ರಾರಂಭವಾದ ಮಾರ್ಗಶಿರ ಮಾಸವು ಶಾಸ್ತ್ರಗಳ ಪ್ರಕಾರ ಶ್ರೀಕೃಷ್ಣನ ಮಾಸ. ಅವರೇ ಶ್ರೀಮದ್ ಭಗವದ್ಗೀತೆಯಲ್ಲಿ ‘ಮಾಸಾನಂ ಮಾರ್ಗಶೀರ್ಷೋಹಂ’ ಅಂದರೆ ತಿಂಗಳುಗಳಲ್ಲಿ ನಾನು ಮಾರ್ಗಶೀರ್ಷ ಎಂದು ಹೇಳುತ್ತಾರೆ. ಪವಿತ್ರ ಮಾರ್ಗಶಿರ ಮಾಸದುದ್ದಕ್ಕೂ ರಾತ್ರಿ ಧ್ಯಾನಕ್ಕೆ ಮುಂಚಿತವಾಗಿ ಸಾಧ್ಯವಾದರೆ ಶ್ರೀಮದ್ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಲು ಎಲ್ಲಾ ಪೊಲೀಸ್ ತರಬೇತಿ ಶಾಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಲಾಗಿದೆ. ಭಗವದ್ಗೀತೆಯನ್ನು ಓದುವುದರಿಂದ ನೇಮಕಾತಿ ಹೊಂದಿದವರಿಗೆ ಸ್ವತಂತ್ರ ಜೀವನವನ್ನು ನಡೆಸುವ ಕಲೆಯನ್ನು ಕಲಿಯಲು ಸಹಾಯವಾಗುತ್ತದೆ” ಎಂದು ಎಡಿಜಿ ಹೇಳಿದ್ದಾರೆ” ಎಂದಿದೆ.
ಗಮನಾರ್ಹವಾಗಿ, ತರಬೇತಿಯಲ್ಲಿ ಪೊಲೀಸರಿಗೆ ಗೋಸ್ವಾಮಿ ತುಳಸಿದಾಸರ ರಾಮಚರಿತಮಾನಸದ ಶ್ಲೋಕಗಳನ್ನು ಪಠಿಸುವಂತೆ ಪ್ರೋತ್ಸಾಹಿಸಿದ ನಾಲ್ಕು ತಿಂಗಳ ನಂತರ, ಭಗವದ್ಗೀತೆ ಪಾರಾಯಣದ ನಿರ್ದೇಶನ ನೀಡಲಾಗಿದೆ. ರಾಮಚರಿತಮಾನಸ ತರಬೇತಿ ನಿರತ ಪೊಲೀಸರಲ್ಲಿ ಶಿಸ್ತು ಮತ್ತು ನೈತಿಕ ಸ್ಪಷ್ಟತೆಯನ್ನು ತುಂಬುತ್ತದೆ ಎಂದು ಹೇಳಲಾಗಿತ್ತು.
ಮಧ್ಯಪ್ರದೇಶದ ವಿರೋಧ ಪಕ್ಷ ಕಾಂಗ್ರೆಸ್ ಹಿರಿಯ ಪೊಲೀಸ್ ಅಧಿಕಾರಿಯ ನಿರ್ದೇಶನವನ್ನು ಟೀಕಿಸಿದೆ. ಪೊಲೀಸ್ ಪಡೆಯನ್ನು “ಮೂಲಭೂತವಾಧೀಕರಣ ಮತ್ತು ಕೇಸರಿಕರಣ’ ಮಾಡುವ ಪ್ರಯತ್ನ ಎಂದಿದೆ.
“ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಧರ್ಮ ಮತ್ತು ನಂಬಿಕೆಯನ್ನು ಅನುಸರಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಎಡಿಜಿ (ತರಬೇತಿ) ನಿರ್ದೇಶಿಸಲ್ಪಟ್ಟಿರುವುದು ಮಧ್ಯಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ಮೂಲಭೂತಗೊಳಿಸುವ ಪ್ರಯತ್ನವಾಗಿದೆ. ಇದು ನಮ್ಮ ದೇಶದ ಸಂವಿಧಾನದ ಮನೋಭಾವಕ್ಕೆ ಅನುಗುಣವಾಗಿಲ್ಲ” ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಹೇಳಿದ್ದಾರೆ. ರಾಜ್ಯ ಪೊಲೀಸರ ತರಬೇತಿ ವಿಭಾಗದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷವು ಎಡಿಜಿ (ತರಬೇತಿ) ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಅದನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಟೀಕಿಸಿದೆ.
“ಒಂದು ರಾಜಕೀಯ ಪಕ್ಷದ ಜನರು ಭಗವದ್ಗೀತೆಯನ್ನು ಕೋಮುವಾದ ಎಂದು ಕರೆಯುತ್ತಿರುವುದು ಆಘಾತಕಾರಿ. ಈ ಪ್ರಾಚೀನ ಪುಸ್ತಕವು ಧರ್ಮಕ್ಕಿಂತ ಜೀವನದ ತತ್ವಶಾಸ್ತ್ರದ ಬಗ್ಗೆ ಇರುವ ವಿಷಯಕ್ಕಾಗಿ ಪ್ರಪಂಚದಾದ್ಯಂತ ಜನರಿಂದ ಪೂಜಿಸಲ್ಪಟ್ಟಿದೆ. ಆದರೆ, ಕಾಂಗ್ರೆಸ್ ಅದನ್ನು ಕೋಮುವಾದೀಕರಿಸಲು ದೃಢನಿಶ್ಚಯವನ್ನು ಹೊಂದಿರುವಂತೆ ತೋರುತ್ತದೆ” ಎಂದು ಬಿಜೆಪಿ ಹೇಳಿದೆ.
ಎಡಿಜಿ (ತರಬೇತಿ) ರಾಜಾ ಬಾಬು ಸಿಂಗ್ ಅವರ ಭಗವದ್ಗೀತೆಗೆ ಸಂಬಂಧಿಸಿದ ನಿರ್ದೇಶನ ಹೊಸದಲ್ಲ. ಕೆಲವು ವರ್ಷಗಳ ಹಿಂದೆ ಗ್ವಾಲಿಯರ್ ಶ್ರೇಣಿಯ ಎಡಿಜಿಯಾಗಿ ನೇಮಕಗೊಂಡಾಗಲೂ ಕೂಡ ಅವರು ಜೈಲು ಕೈದಿಗಳಿಗೆ ಭಗವದ್ಗೀತೆಯ ಪ್ರತಿಗಳನ್ನು ವಿತರಿಸಿದ್ದರು ಮತ್ತು ಅಂತಹುದೇ ಓದುವ ಅವಧಿಗಳನ್ನು ಪ್ರಾರಂಭಿಸಿದ್ದರು ಎಂದು ವರದಿಗಳು ವಿವರಿಸಿವೆ.
ಸಿಂಗ್ ಅವರು ಡಿಸೆಂಬರ್ 4 ರವರೆಗೆ ಪ್ರತಿದಿನ ಸಂಜೆ ಎಂಟು ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆಯ ಅಧ್ಯಾಯಗಳನ್ನು ತರಬೇತಿ ನಿರತ ಪೊಲೀಸರು ಪಠಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಡಿಸೆಂಬರ್ 21 ರ ವಿಶ್ವ ಧ್ಯಾನ ದಿನವನ್ನು ಗುರುತಿಸಲು, ಡಿಸೆಂಬರ್ 19 ಮತ್ತು 21 ರ ನಡುವೆ ಮೂರು ದಿನಗಳ ಕಾಲ ಹಾರ್ಟ್‌ಫುಲ್‌ನೆಸ್ ಧ್ಯಾನ ಅವಧಿಗಳನ್ನು ನಡೆಸಲು ಅವರು ಯೋಜಿಸಿದ್ದಾರೆ. ಅಪ್ಪರ್ ಲೇಕ್ (ಭೋಪಾಲ್), ರಾಜ್‌ವಾಡ (ಇಂದೋರ್), ಧುಂಧರ್ ಜಲಪಾತ (ಜಬಲ್‌ಪುರ), ಮಹಾಕಾಳೇಶ್ವರ ದೇವಸ್ಥಾನ (ಉಜ್ಜಯಿನಿ) ಮತ್ತು ಖಜುರಾಹೊ ದೇವಸ್ಥಾನಗಳು (ಛತ್ತರ್‌ಪುರ) ನಂತಹ ಪಾರಂಪರಿಕ ಮತ್ತು ಐತಿಹಾಸಿಕ ತಾಣಗಳಲ್ಲಿ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಈ ಕಾರ್ಯಕ್ರಮವು ಎಲ್ಲಾ ನಾಗರಿಕರಿಗೆ ಮುಕ್ತವಾಗಿದ್ದು, 55 ಜಿಲ್ಲೆಗಳಾದ್ಯಂತ ಪೊಲೀಸ್ ಶ್ರೇಣಿಯ 76 ತರಬೇತಿ ಪಡೆದ ಹಾರ್ಟ್‌ಫುಲ್‌ನೆಸ್ ಬೋಧಕರು ಇದರ ನೇತೃತ್ವ ವಹಿಸಲಿದ್ದಾರೆ. ಇದರಿಂದ ಇಲಾಖೆಗೆ ಯಾವುದೇ ವೆಚ್ಚವಿಲ್ಲ ಎಂದು ವರದಿಯಾಗಿದೆ.
ವಂದೇ ಭಾರತ್ ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ


