ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ವಿರುದ್ದ ಭಾನುವಾರ (ನ.9) ಬೃಹತ್ ಪ್ರತಿಭಟನೆ ನಡೆದಿದೆ. ಪೋಷಕರು, ಮಕ್ಕಳು, ಪರಿಸರ ಹೋರಾಟಗಾರರು ಮತ್ತು ಕೆಲ ರಾಜಕೀಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ ನಾಗರಿಕರು, “ಸ್ವಚ್ಚ ಗಾಳಿ ನಮ್ಮೆಲ್ಲರ ಹಕ್ಕು” ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ದ ಗಾಳಿ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಲಾದ ಮೂಲಭೂತ ಹಕ್ಕಾಗಿದೆ (ಜೀವಿಸುವ ಹಕ್ಕು) ಎಂದು ಹೇಳಿದ್ದಾರೆ.
ವಿಷ ಗಾಳಿಯಿಂದ ಈಗಾಗಲೇ ಜನರು ಅನಾರೋಗ್ಯಕ್ಕೀಡಾಗಿದ್ದಾರೆ. ಮೂವರಲ್ಲಿ ಒಬ್ಬ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಅಸಲಿ ದತ್ತಾಂಶಗಳನ್ನು ಮುಚ್ಚಿಟ್ಟು ರಾಜಕೀಯ ಮಾಡುತ್ತಿದೆ. ವಸ್ತುಸ್ಥಿತಿ ತಿಳಿಯಬೇಕೆಂದರೆ ಜನಪ್ರತಿನಿಧಿಗಳು ಬೀದಿಗಿಳಿಯಬೇಕು ಎಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸಂಸ್ಥೆಗಳು ಸುಳ್ಳು ದತ್ತಾಂಶಗಳನ್ನು ಒದಗಿಸಿ ರಾಜಕೀಯ ನಾಯಕರ ಹಿತ ಕಾಯುತ್ತಿವೆ. ವಾಯುಮಾಲಿನ್ಯ ರಾಜಕೀಯ ಮಾಡಬೇಕಾದ ವಿಷಯವಲ್ಲ. ಇಡೀ ನಗರ ವಿಷಗಾಳಿಯಿಂದ ತುಂಬಿಕೊಂಡಿದೆ. ಜನರು ಸಾಯುತ್ತಿದ್ದಾರೆ. ಹಾಗಾಗಿ, ಸ್ವಾಯತ್ತ ಸಂಸ್ಥೆಗಳಿಂದ ವಾಯು ಗುಣಮಟ್ಟವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯ ವಾಯುಮಾಲಿನ್ಯದ ಬಗ್ಗೆ ಧ್ವನಿ ಎತ್ತದ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಇರುವ ಜನರ ವಿರುದ್ದವೂ ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರತಿಕ್ಷಣ ಉಸಿರಾಡುವ ಗಾಳಿಯ ಗಾಳಿಯ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಜನರು, ಇನ್ಯಾವುದನ್ನು ಪ್ರಶ್ನಿಸಿಯಾರು?” ಎಂದು ಕೆಲ ಪ್ರತಿಭಟನಾಕಾರರು ಪ್ರಶ್ನಿಸಿದ್ದಾಗಿ ವರದಿಯಾಗಿದೆ.
ಪೂರ್ವಾನುಮತಿ ಪಡೆಯದೆ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಕ್ಕೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.
ದೆಹಲಿಯ ವಾಯುಮಾಲಿನ್ಯದ ವಿರುದ್ದ ನವೆಂಬರ್ 6ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಅದರಲ್ಲಿ ವಿಜ್ಞಾನಿಗಳು, ಪರಿಸರ ಹೋರಾಟಗಾರರು, ವಿವಿಧ ವಲಯಗಳ ಪ್ರಮುಖರು ಮತ್ತು ಸಾಮಾನ್ಯ ನಾಗರಿಕರು ಸೇರಿ ಸುಮಾರು 80 ಮಂದಿ ಪಾಲ್ಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಪ್ರತಿಭಟನೆಯನ್ನು ಬೆಂಬಲಿಸಿದ್ದರು.
ಶುದ್ಧ ಗಾಳಿ ಪಡೆಯುವುದು ಮೂಲಭೂತ ಹಕ್ಕು ರಾಹುಲ್ ಗಾಂಧಿ ಹೇಳಿದ್ದರು. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಅವರು ಟೀಕಿಸಿದ್ದರು.
ಬಹುಪತ್ನಿತ್ವ ನಿಷೇಧ ಮಸೂದೆಗೆ ಅಸ್ಸಾಂ ಸಂಪುಟ ಅಸ್ತು : ಬುಡಕಟ್ಟು ಸಮುದಾಯಗಳಿಗೆ ವಿನಾಯಿತಿ


