ನವದೆಹಲಿ: ಶಾಂತಿಯುತವಾಗಿ ಶುದ್ಧಗಾಳಿಗಾಗಿ ಹೋರಾಟ ಮಾಡುತ್ತಿರುವ ನಾಗರಿಕರನ್ನು ಏಕೆ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವುದನ್ನು ವಿರೋಧಿಸಿ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದ ಪರಿಸರವಾದಿ ವಿಮ್ಲೇಯ ಝಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜನರನ್ನು ಪೊಲೀಸರು ಬಂಧಿಸಿ ಬಸ್ಸಿಗೆ ತಳ್ಳಿ ಅಪರಾಧಿಗಳಂತೆ ನಡೆಸಿಕೊಂಡಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
“ಶುದ್ಧ ಗಾಳಿ ಕೇಳುವ ನಾಗರಿಕರ ಮೇಲೆ ದಾಳಿ ಮಾಡುವ ಬದಲು, ಮೊದಲೇ ವಾಯು ಮಾಲಿನ್ಯದ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದನ್ನು ವಿರೋಧಿಸಿ ಪೋಷಕರು ಮತ್ತು ಪರಿಸರ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಭಾನುವಾರ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪೊಲೀಸರ ಪ್ರಕಾರ, ಅನುಮತಿಯಿಲ್ಲದೆ ಸಭೆ ಸೇರಿದ್ದಕ್ಕಾಗಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ವಾಯು ಮಾಲಿನ್ಯವು ಕೋಟ್ಯಂತರ ಭಾರತೀಯರ ಮೇಲೆ ಪರಿಣಾಮ ಬೀರುತ್ತಿದ್ದು, ನಮ್ಮ ಮಕ್ಕಳು ಮತ್ತು ನಮ್ಮ ರಾಷ್ಟ್ರದ ಭವಿಷ್ಯಕ್ಕೆ ಹಾನಿ ಉಂಟುಮಾಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ಆದರೆ “ಮತ ಚೋರಿ” ಮೂಲಕ ಅಧಿಕಾರಕ್ಕೆ ಬಂದ ಸರ್ಕಾರವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅಥವಾ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿಲ್ಲ ಎಂದು ಗಾಂಧಿ ಹೇಳಿದರು.
ಪ್ರತಿಭಟನಾಕಾರರಲ್ಲಿ ಹಲವರು ತಾಯಂದಿರು ಮಕ್ಕಳೊಂದಿಗೆ ಇದ್ದು, ಶುದ್ಧ ಗಾಳಿಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸರ್ಕಾರದ ಕ್ರಮವನ್ನು ಒತ್ತಾಯಿಸಲು ತಾವು ಒಟ್ಟುಗೂಡಿದ್ದೇವೆ ಎಂದು ಹೇಳಿದ್ದಾರೆ.
ನವದೆಹಲಿಯ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹ್ಲಾ, ಬಂಧನಗಳು ಮುಂಜಾಗ್ರತಾ ಕ್ರಮವಾಗಿ ನಡೆದಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.


