ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಒದಗಿಸುವ ಸಂವಿಧಾನ (ನೂರ ಆರನೇ ತಿದ್ದುಪಡಿ) ಕಾಯ್ದೆ 2023 (ನಾರಿ ಶಕ್ತಿ ವಂದನ ಅಧಿನಿಯಂ)ರ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ನ.10) ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠವು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದೆ.
ಮುಂದಿನ ಜನಗಣತಿ ನಡೆದು, ಕ್ಷೇತ್ರ ಪುನರ್‌ವಿಂಗಡನೆ ಪೂರ್ಣಗೊಂಡ ಬಳಿಕವಷ್ಟೇ ಮಹಿಳೆಯರ ಮೀಸಲಾತಿ ಕಾನೂನು ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಈ ಕುರಿತು ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ, “ಮೀಸಲಾತಿ ಅನುಷ್ಠಾನವನ್ನು ಜನಗಣತಿಗೆ ಅವಲಂಬಿತವಾಗಿ ಮಾಡುವುದರಲ್ಲಿ ಯಾವುದೇ ತಾರ್ಕಿಕತೆ ಇಲ್ಲ. ಏಕೆಂದರೆ, ಜನಗಣತಿ ಇನ್ನೂ ಪ್ರಾರಂಭಗೊಂಡಿಲ್ಲ. ಯಾವಾಗ ಪ್ರಾರಂಭವಾಗಲಿದೆ ಎಂದೂ ಹೇಳಿಲ್ಲ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, ಕಾನೂನಿನ ಜಾರಿ ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ಉತ್ತರಿಸಿದ ವಕೀಲ, ನಾವು ಅದರ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಇನ್ನೂ ಪ್ರಾರಂಭಗೊಳ್ಳದ ಜನಗಣತಿಗೆ ಮೀಸಲಾತಿಯನ್ನು ಅವಲಂಬನೆ ಮಾಡಿರುವುದಷ್ಟೇ ನಮ್ಮ ಕಳಕಳಿ. ಏಕೆಂದರೆ, ಜನಗಣತಿ ಯಾವಾಗ ಪ್ರಾರಂಭಗೊಳ್ಳುತ್ತದೆ ಎಂಬ ಸ್ಪಷ್ಟತೆ ಇಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ನಾಗರತ್ನ ಅವರು, ನೀವು ಯಾವಾಗ ಜನಗಣತಿ ಪ್ರಾರಂಭಿಸುತ್ತೀರಿ ಎಂದಷ್ಟೇ ನಾವು ಕೇಳಬಹುದು. ಬಹುಷ ಅವರು ವೈಜ್ಞಾನಿಕ ದತ್ತಾಂಶ ಆಧರಿಸಿ ಮೀಸಲಾತಿ ಜಾರಿಗೊಳಿಸಲು ಅದನ್ನು ಜನಗಣತಿಗೆ ಅವಲಂಬನೆ ಮಾಡಿರಬಹುದು ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ, ಸಂಸತ್ತು ಈಗಾಗಲೇ ಅನುಮೋದನೇ ನೀಡಿರುವ ಕಾನೂನನ್ನು ಯಾವುದೇ ವೈಜ್ಞಾನಿಕ ದತ್ತಾಂಶಗಳಿಲ್ಲದೆ ಮಾಡಿರಲು ಸಾಧ್ಯವಿಲ್ಲ. ಪ್ರಸ್ತಾವಿತ ಮೀಸಲಾತಿ ಪ್ರಮಾಣ ನಿರ್ಧರಿಸುವ ಮೊದಲು ಅವರು ದೃಢವಾದ ವೈಜ್ಞಾನಿಕ ಅಥವಾ ಸತ್ಯಾಂಶ ಆಧಾರಿತ ದತ್ತಾಂಶಗಳನ್ನು ನೋಡಿಕೊಂಡಿದ್ದಾರೆ ಎಂದು ಊಹಿಸಬೇಕು. ಆದ್ದರಿಂದ, ಕಾನೂನು ಮಾಡುವ ಸಮಯದಲ್ಲಿ ಸರಿಯಾದ ಸಾಕ್ಷ್ಯಗಳು ಇದ್ದವು ಎಂದು ನಾವು ಭಾವಿಸಬೇಕು ಎಂದು ಹೇಳಿದ್ದಾರೆ.
ವಾದ ಆಲಿಸುವ ವೇಳೆ “ದೇಶದ ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಮಹಿಳೆಯರು. ಮಹಿಳೆಯರ ಸಂಖ್ಯೆ ಶೇಕಡ 48ರಷ್ಟಿದೆ. ಮಹಿಳೆಯರಿಗೆ ರಾಜಕೀಯ ಸಮಾನತೆ ದೊರಕಿಸಿಕೊಡಲು ಈ ಮೀಸಲಾತಿ ಅಗತ್ಯವಿದೆ ಎಂದು ನ್ಯಾ. ನಾಗರತ್ನ ಮೌಖಿಕವಾಗಿ ಹೇಳಿದ್ದಾರೆ” ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವಾದ ಆಲಿಸಿದ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ದೇಶಿಸಿದೆ ಎಂದು ತಿಳಿಸಿದೆ.
ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಸಂವಿಧಾನದ 334ಎ(1) ವಿಧಿಯಲ್ಲಿ ಇರುವ ‘ಜನಗಣತಿ ನಡೆಸಿ ಕ್ಷೇತ್ರ ಪುನರ್‌ವಿಂಗಡನೆ ಮಾಡಿದ ನಂತರ’ ಎಂಬ ಷರತ್ತನ್ನು ಆರಂಭದಿಂದಲೇ ಅಸಾಂವಿಧಾನಿಕ (void-ab-initio) ಎಂದು ಘೋಷಿಸಬೇಕು ಮತ್ತು ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಕೋರಿದ್ದಾರೆ.
ವಕೀಲ ವರುಣ್ ಠಾಕೂರ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಮೀಸಲಾತಿಗೆ ಸಂಬಂಧಿಸಿದ ಹಲವಾರು ಹಿಂದಿನ ಸಾಂವಿಧಾನಿಕ ತಿದ್ದುಪಡಿಗಳನ್ನು ಯಾವುದೇ ಜನಗಣತಿ ಅಥವಾ ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಗೆ ಅವಲಂಭಿಸದೆ ತಕ್ಷಣವೇ ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ. ಭಾರತದ ಜನಸಂಖ್ಯೆಯ ಸುಮಾರು 50 ಶೇಕಡದಷ್ಟಿರುವ ಮಹಿಳೆಯರ ಪ್ರಾತಿನಿಧ್ಯ ಶಾಸಕಾಂಗ ಸಂಸ್ಥೆಗಳಲ್ಲಿ ಕೇವಲ 4 ಶೇಕಡ ಇದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡುವ ಉದ್ದೇಶಕ್ಕೆ ಇಂತಹ ನಿಬಂಧನೆಗಳು ‘ಅಡಚಣೆ’ಯಾಗುತ್ತದೆ ಎಂದು ಹೇಳಲಾಗಿದೆ.
ರಾಷ್ಟ್ರಪತಿಗಳು ಒಪ್ಪಿಗೆ ನೀಡುವ ಮೊದಲೇ ಮಸೂದೆಯನ್ನು ಪ್ರಶ್ನಿಸಿ ಇದೇ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ನಿಷ್ಪ್ರಯೋಜಕವೆಂದು ನ್ಯಾಯಾಲಯ ವಜಾಗೊಳಿಸಿತ್ತು.
ಎಲ್.ಕೆ ಅಡ್ವಾಣಿಯನ್ನು ಹಾಡಿ ಹೊಗಳಿದ ಶಶಿ ತರೂರ್ : ಅಂತರ ಕಾಯ್ದುಕೊಂಡ ಕಾಂಗ್ರೆಸ್


