ಒಂಭತ್ತು ಜನರ ಸಾವಿಗೆ ಕಾರಣವಾದ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್‌ಗಳನ್ನು ಕೂಡ ಅನ್ವಯಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ದೆಹಲಿ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಘಟನಾ ಸ್ಥಳದಲ್ಲಿ ತನಿಖೆ ಕೈಗೊಂಡಿವೆ ಎಂದು ಹೇಳಿದ್ದಾರೆ.
ಸ್ಪೋಟ ಸಂಭವಿಸಿದ ಸ್ಥಳದಲ್ಲಿ ಕಾರಿನೊಳಗೆ ಕೆಲವು ದೇಹದ ಭಾಗಗಳು ಕಂಡು ಬಂದಿವೆ. ಎಫ್‌ಎಸ್‌ಎಲ್ ತಂಡ ಅವುಗಳನ್ನು ಸಂಗ್ರಹಿಸಿವೆ. ಅದರ ಮೂಲಕ ಯಾವ ಮಾಹಿತಿಗಳು ಸಿಗಲಿವೆ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಬಂಥಿಯಾ ಮಾಹಿತಿ ನೀಡಿದ್ದಾರೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ ಒಂದರ ಬಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರಣವೇನೆಂದು ಪೊಲೀಸರು ಇನ್ನೂ ತಿಳಿಸಿಲ್ಲ.
ಸೋಮವಾರ (ನ.10) ಸಂಜೆ 6.52ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ತಿಳಿಸಿದ್ದಾರೆ.
“ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ರೆಡ್ ಸಿಗ್ನಲ್ ಬಿದ್ದಾಗ ನಿಂತಿದೆ. ಈ ವೇಳೆ ಅದರಲ್ಲಿ ಸ್ಪೋಟ ಸಂಭವಿಸಿದೆ. ಪರಿಣಾಮ ಜನರ ಜೀವ ಹೋಗಿದೆ ಮತ್ತು ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ವಾಹನಗಳಿಗೆ ಹಾನಿಯಾಗಿದೆ” ಎಂದು ಗೋಲ್ಚಾ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ದೆಹಲಿ ಸ್ಫೋಟದಲ್ಲಿ ಬಳಸಲಾದ ಡಿಟೋನೇಟರ್‌ಗಳು ಫರಿದಾಬಾದ್‌ನ ಭಯೋತ್ಪಾದಕ ಘಟಕದೊಂದಿಗೆ ಸಂಬಂಧ ಹೊಂದಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂಬುವುದಾಗಿ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೆಹಲಿ ಪೊಲೀಸರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡುವ ಮೂಲಕ ಐ20 ಕಾರನ್ನು ಅನ್ನು ಪತ್ತೆಹಚ್ಚಿದ್ದಾರೆ. ಕೆಂಪು ಕೋಟೆ ಬಳಿ ಸ್ಫೋಟಕ್ಕೆ 20 ನಿಮಿಷಗಳ ಮೊದಲು ಮುಸುಕುಧಾರಿ ವ್ಯಕ್ತಿ ಹುಂಡೈ ಐ20 ಕಾರು ಚಲಾಯಿಸುತ್ತಿದ್ದದ್ದು ಕಂಡು ಬಂದಿದೆ ಎಂದು ವರದಿ ಹೇಳಿದೆ.
ಭದ್ರತಾ ಕಾರಣಗಳಿಗಾಗಿ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಡೆಲ್ಲಿ ಮೆಟ್ರೋ ರೈಲ್ ಕಾರ್ಪೋರೇಶನ್ ತಿಳಿಸಿದೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಕೆಂಪು ಕೋಟೆಯನ್ನು ಮೂರು ದಿನಗಳ ಕಾಲ ಮುಚ್ಚಲಿದೆ ಎಂದು ವರದಿಗಳು ಹೇಳಿವೆ.
ಕೆಂಪು ಕೋಟೆ ಬಳಿ ಸ್ಫೋಟದ ನಂತರ, ದೆಹಲಿ ಪೊಲೀಸರು ರಾತ್ರಿಯಿಡೀ ಘಟನಾ ಸ್ಥಳದ ಸುತ್ತಮುತ್ತಲಿನ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೆಹಲಿ ಸ್ಪೋಟದ ಬಳಿಕ ಮಹಾರಾಷ್ಟ್ರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಬೈ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


