ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ಮಂಗಳವಾರ (ನ.11) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನೋಟಿಸ್ ಜಾರಿ ಮಾಡಿದೆ.
ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚ್ಚೇರಿಯ ಎಸ್‌ಐಆರ್ ಪ್ರಶ್ನಿಸಿ ಡಿಎಂಕೆ, ಟಿಎಂಸಿ, ಕಾಂಗ್ರೆಸ್, ಸಿಪಿಐ(ಎಂ) ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವುಗಳ ಜೊತೆ ಬಿಹಾರಕ್ಕೆ ಸಂಬಂಧಿಸಿದ ಅರ್ಜಿಗಳು ಸೇರಿದಂತೆ ಎಲ್ಲವನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಗುತ್ತಿದೆ.
ಮಂಗಳವಾರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಮುಂದಿನ ವಿಚಾರಣೆಯನ್ನು ನವೆಂಬರ್ 26ಕ್ಕೆ ನಿಗದಿ ಮಾಡಿದೆ. ಈ ನಡುವೆ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ಆದೇಶಗಳನ್ನು ನೀಡದಂತೆ ಹೈಕೋರ್ಟ್‌ಗಳಿಗೆ (ಮದ್ರಾಸ್, ಕಲ್ಕತ್ತಾ, ಪಾಟ್ನಾ) ಸೂಚಿಸಿದೆ.
ಅಕ್ಟೋಬರ್ 27ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಎಸ್ಐಆರ್ ಘೋಷಣೆ ಮಾಡಿದ್ದಾರೆ.
ತೀವ್ರ ವಿರೋಧಗಳ ನಡುವೆಯೂ ನವೆಂಬರ್ 4ರಂದು ಎಸ್‌ಐಆರ್‌ನ ಮೊದಲ ಹಂತ ಮನೆಗಳ ಎಣಿಕೆಯನ್ನು ಚುನಾವಣಾ ಆಯೋಗ ಪ್ರಾರಂಭಿಸಿದೆ. ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿ ಮತ್ತು 2026ರ ಫೆಬ್ರವರಿ 7ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.
ಬಿಹಾರದ ಎಸ್‌ಐಆರ್ ಪ್ರಕ್ರಿಯೆಯನ್ನು 2025ರ ಜೂನ್‌ನಲ್ಲಿ ಪ್ರಾರಂಭಿಸಿ, ವಿಧಾನಸಭೆ ಚುನಾವಣೆಗೆ ಮುನ್ನ ಸೆಪ್ಟೆಂಬರ್ 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿರುವ ಮೂಲಕ ಮುಕ್ತಾಯಗೊಳಿಸಲಾಗಿದೆ.
ಬಿಹಾರದ ಎಸ್‌ಐಆರ್ ಪ್ರಶ್ನಿಸಿ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸುದೀರ್ಘವಾಗಿ ವಿಚಾರಣೆ ನಡೆಸಿದೆ. ನ್ಯಾಯಾಲಯ ತಡೆ ನೀಡದ ಕಾರಣ ಚುನಾವಣಾ ಆಯೋಗ ಎಸ್‌ಐಆರ್ ಮುಗಿಸಿದೆ. ಆದರೆ, ಈ ನಡುವೆ ಸುಪ್ರೀಂ ಕೋರ್ಟ್ ಹಲವು ನಿರ್ದೇಶನಗಳನ್ನು ಆಯೋಗಕ್ಕೆ ನೀಡಿದೆ.
ಸೆಪ್ಟೆಂಬರ್ 8ರಂದು, ಬಿಹಾರದ ಎಸ್‌ಐಆರ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಮಾನ್ಯ ಗುರುತಿನ ಪುರಾವೆಯಾಗಿ ಸ್ವೀಕರಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಪೌರತ್ವದ ಪುರಾವೆಯಾಗಿ ಚುನಾವಣಾ ಆಯೋಗವು ಅನುಮತಿಸಿದ 11 ದಾಖಲೆಗಳಲ್ಲಿ ಆಧಾರ್ ಕಾರ್ಡ್ ಇರಲಿಲ್ಲ. ಅರ್ಜಿದಾರರು ಆಧಾರ್ ಅನ್ನು ಹೊರಗಿಡುವುದನ್ನು ‘ಅಸಂಬದ್ಧ’ ಎಂದಿದ್ದರು. ಇದು ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಗುರುತಿನ ಚೀಟಿ ಎಂದು ವಾದಿಸಿದ್ದರು.
ಚುನಾವಣಾ ಆಯೋಗವು ಎಸ್‌ಐಆರ್ ಅನ್ನು ಮೃತರ ಹೆಸರುಗಳು, ನಕಲಿ ನಮೂದುಗಳು ಮತ್ತು ದಾಖಲೆರಹಿತ ವಲಸಿಗರ ಹೆಸರುಗಳನ್ನು ತೆಗೆದುಹಾಕುವ ಶುದ್ಧೀಕರಣ ಪ್ರಯತ್ನವೆಂದು ಪದೇ ಪದೇ ಸಮರ್ಥಿಸಿಕೊಂಡಿದೆ.
ಬಿಹಾರದ ಎಸ್‌ಐಆರ್‌ನಲ್ಲಿ ಮರಣ ಹೊಂದಿದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು ಎರಡೆರಡು ಬಾರಿ ನೋಂದಣಿಯಾದವರು ಎಂಬ ಕಾರಣಗಳನ್ನು ನೀಡಿ ಸುಮಾರು 68 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಪರೋಕ್ಷವಾಗಿ ಎನ್‌ಆರ್‌ಸಿ ಮಾಡುತ್ತಿದೆ ಎಂದು ಆರೋಪಿಸಿವೆ.


