ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸುವ ಮೂಲಕ ಮತದಾರರ ಪೌರತ್ವವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನಿರ್ಧರಿಸಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಬಿಹಾರದಲ್ಲಿ ಕೈಗೊಂಡ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ ಎಂದು ವರದಿ ಹೇಳಿದೆ.
ಎಸ್‌ಐಆರ್ ಮೂಲಕ ಪೌರತ್ವ ನಿರ್ಧರಿಸದಂತೆ ಚುನಾವಣಾ ಆಯೋಗಕ್ಕೆ ತಡೆ ನೀಡಲು ಅರ್ಜಿದಾರರಲ್ಲಿ ಒಬ್ಬರಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಕೋರಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರು ನೋಂದಣಿಯಾಗಿ ಉಳಿಯದಂತೆ ನೋಡಿಕೊಳ್ಳಲು ಡಿ-ಡೂಪ್ಲಿಕೇಶನ್ ಸಾಫ್ಟ್‌ವೇರ್ ಬಳಸುವಂತೆಯೂ ಅದು ಸಲಹೆ ನೀಡಿದೆ. ಇದು ಒಳ್ಳೆಯ ಸಲಹೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದಲ್ಲಿ ಗ್ರಾಮ ಸಭೆಯನ್ನು ನಡೆಸುವುದನ್ನು ಕಡ್ಡಾಯಗೊಳಿಸುವ ತಾನೇ ನೀಡಿದ್ದ ಕೈಪಿಡಿಯ ಮಾರ್ಗಸೂಚಿ ಅನುಸರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಎಡಿಆರ್ ಕೋರಿದೆ.
ಎಣಿಕೆ ನಮೂನೆಗಳನ್ನು ಸಲ್ಲಿಸುವ ಎಲ್ಲಾ ಮತದಾರರಿಗೆ ಸ್ವೀಕೃತಿ ಚೀಟಿ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದಾರೆ. ಚುನಾವಣಾ ಆಯೋಗವು 2003ರ ಮತದಾರರ ಪಟ್ಟಿ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಮತ್ತು ಅದು ತಿದ್ದುಪಡಿಗಳಿಗೆ ಆಧಾರವಾಗಿರಬೇಕು ಎಂದು ಹೇಳಿದ್ದಾರೆ.
ಭೂಷಣ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮತದಾರರ ಪಟ್ಟಿಯನ್ನು ಎಲ್ಲಿ ಬೇಕಾದರೂ ಹುಡುಕಬಹುದಾದ ರೂಪದಲ್ಲಿ ಇಟ್ಟರೆ ಗೌಪ್ಯತೆ ಅಥವಾ ಸುರಕ್ಷತಾ ಸಮಸ್ಯೆಗಳು ಉಂಟಾಗುತ್ತವೆಯೇ ಎಂದು ಪ್ರಶ್ನಿಸಿದೆ ಎಂದು ಬಾರ್ & ಬೆಂಚ್ ವರದಿ ತಿಳಿಸಿದೆ.
ನಂತರ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ನವೆಂಬರ್ 26ಕ್ಕೆ ನ್ಯಾಯಾಲಯದ ಮುಂದೂಡಿದೆ. ಮುಖ್ಯ ಪ್ರಕರಣದ ಜೊತೆಗೆ ಎಡಿಆರ್‌ನ ಅರ್ಜಿಯನ್ನು ಕೂಡ ನ್ಯಾಯಾಲಯ ವಿಚಾರಣೆ ನಡೆಸಲಿದೆ ವರದಿ ಬಾರ್ & ಬೆಂಚ್ ಹೇಳಿದೆ.
ತಮಿಳುನಾಡು, ಪ.ಬಂಗಾಳದಲ್ಲಿ ಎಸ್‌ಐಆರ್ ಪ್ರಶ್ನಿಸಿ ಅರ್ಜಿ : ಚು. ಆಯೋಗಕ್ಕೆ ಸುಪ್ರೀಂ ನೋಟಿಸ್


