ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ (ಎಂಡಿಯು) ಮಹಿಳಾ ನೈರ್ಮಲ್ಯ ಸಿಬ್ಬಂದಿಗೆ ಮುಟ್ಟು ಸಾಬೀತುಪಡಿಸಲು ಖಾಸಗಿ ಅಂಗದ ಫೋಟೋ ಕೇಳಲಾಗಿದೆ ಎಂಬ ಆಘಾತಕಾರಿ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೇಂದ್ರ ಮತ್ತು ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಎಸ್‌ಸಿಬಿಎ ತನ್ನ ಅರ್ಜಿಯಲ್ಲಿ ಕೋರಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರ ಘನತೆ, ಗೌಪ್ಯತೆ, ದೈಹಿಕ ಸ್ವಾಯತ್ತತೆ ಮತ್ತು ಆರೋಗ್ಯದ ಹಕ್ಕುಗಳನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆಯೂ ಮನವಿ ಮಾಡಿದೆ.
ಮುಟ್ಟಿನ ಕಾರಣದಿಂದಾಗಿ ಅಸ್ವಸ್ಥರಾಗಿದ್ದಾರೆಂದು ತಿಳಿಸಿದ್ದರೂ, ಇಬ್ಬರು ಗುತ್ತಿಗೆ ಮೇಲ್ವಿಚಾರಕರು
ಕೆಲಸ ಮುಂದುವರಿಸಲು ಒತ್ತಾಯಿಸಿದ್ದಾರೆ. ತಮ್ಮ ಕೆಲಸ ವೇಗಗೊಳಿಸಲು ನಿರಾಕರಿಸಿದಾಗ ಮೇಲ್ವಿಚಾರಕರು ಖಾಸಗಿ ಅಂಗದ ಫೋಟೋವನ್ನು ಮುಟ್ಟಿನ ಪುರಾವೆಯಾಗಿ ಕೇಳಿದ್ದಾರೆ. ಅಲ್ಲದೆ, ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 31ರಂದು ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ, ಹಲ್ಲೆ ಮತ್ತು ಮಹಿಳೆಯರ ಘನತೆಗೆ ಅವಮಾನ ಮಾಡಿದ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಕೂಡ ಅನ್ವಯಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯವು ಇಬ್ಬರು ಮೇಲ್ವಿಚಾರಕರನ್ನು ಅಮಾನತುಗೊಳಿಸಿದೆ ಮತ್ತು ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ಈ ಘಟನೆ ಅಕ್ಟೋಬರ್ 26 ರಂದು ಹರಿಯಾಣ ರಾಜ್ಯಪಾಲ ಆಶಿಮ್ ಕುಮಾರ್ ಘೋಷ್ ಅವರ ನಿಗದಿತ ಭೇಟಿಗೆ ಮುಂಚಿತವಾಗಿ ನಡೆದಿದೆ ಎಂದು ವರದಿಯಾಗಿದೆ.
ತಮ್ಮ ವಿರುದ್ದದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೇಲ್ವಿಚಾರಕರು, ನಾವು ಮೇಲಧಿಕಾರಿಗಳ ಆದೇಶ ಪಾಲಿಸಿದ್ದೇವೆ ಎಂದಿದ್ದಾರೆ. ಇದನ್ನು ತಳ್ಳಿ ಹಾಕಿರುವ ವಿವಿಯ ಸಹಾಯಕ ರಿಜಿಸ್ಟ್ರಾರ್ ಶ್ಯಾಮ್ ಸುಂದರ್, ನಾವು ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಎಂಡಿಯುನಲ್ಲಿ ನಡೆದ ಘಟನೆ “ಮಹಿಳೆಯರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ” ಎಂದು ಎಸ್‌ಸಿಬಿಎ ತನ್ನ ಅರ್ಜಿಯಲ್ಲಿ ಹೇಳಿದೆ. ಭವಿಷ್ಯದಲ್ಲಿ ಈ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ವ್ಯವಸ್ಥಿತ ರಕ್ಷಣೆಗಳನ್ನು ಕೋರಿದೆ.
ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ‘ಋತುಚಕ್ರ ರಜೆ’ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ


