ಮಹಾರಾಷ್ಟ್ರ ದಲಿತ ಮಹಾಸಂಘದ ಅಧ್ಯಕ್ಷ ಉತ್ತಮ್ ಮೋಹಿತೆ (38) ಅವರನ್ನು ಮಂಗಳವಾರ ಸಂಜೆ (ನ.11) ಸಾಂಗ್ಲಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಎಂಟು ಜನರ ತಂಡ ಇರಿದು ಹತ್ಯೆ ಮಾಡಿದೆ. ಹಳೆಯ ದ್ವೇಷದ ಹಿನ್ನೆಲೆ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಶಾರುಖ್ ರಫೀಕ್ ಶೇಖ್ (26) ಎಂಬಾತ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡು ಬುಧವಾರ (ನ.12) ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೋಹಿತೆ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಮುಗಿದು ಅತಿಥಿಗಳು ನಿರ್ಗಮಿಸುತ್ತಿದ್ದರು. ಈ ವೇಳೆ ಚಾಕು, ಕಬ್ಬಿಣದ ರಾಡ್ ಮತ್ತು ದೊಣ್ಣೆಗಳೊಂದಿಗೆ ಶಸ್ತ್ರ ಸಜ್ಜಿತವಾಗಿ ಆಗಮಿಸಿದ ಪುರುಷರ ಗುಂಪು ದಾಳಿ ಪ್ರಾರಂಭಿಸಿದೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ಅರಿತ ಮೋಹಿತೆ, ರಕ್ಷಣೆಗಾಗಿ ಮನೆಯೊಳಗೆ ಓಡಿ ಹೋಗಿದ್ದರು. ಅಲ್ಲಿಗೆ ನುಗ್ಗಿದ ತಂಡ ಮೋಹಿತೆ ಅವರ ಹೊಟ್ಟೆ ಮತ್ತು ಎದೆಗೆ ಹಲವು ಬಾರಿ ಇರಿದಿದೆ. ತಲೆ ಮತ್ತು ತೋಳುಗಳಿಗೆ ಕಬ್ಬಿಣದ ರಾಡ್‌ಗಳು ಮತ್ತು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಘರ್ಷಣೆಯ ಸಮಯದಲ್ಲಿ, ದಾಳಿಕೋರರಲ್ಲಿ ಒಬ್ಬನಾದ ಶೇಖ್ ಎಂಬಾತನಿಗೆ ತೊಡೆಯ ಮೇಲೆ ತೀವ್ರವಾದ ಇರಿತದ ಗಾಯವಾಗಿತ್ತು. ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೋಹಿತೆ ಅವರನ್ನು ಸೋದರಳಿಯ ಸಾಂಗ್ಲಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ನಡುವೆ ದಾಳಿಕೋರರು ಕೂಡ ತೀವ್ರವಾಗಿ ಗಾಯಗೊಂಡಿದ್ದ ಶೇಖ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಬುಧವಾರ ಬೆಳಿಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹುಟ್ಟು ಹಬ್ಬ ಆಚರಣೆಯ ಸಮಯದಲ್ಲಿ ಮೋಹಿತೆ ಮತ್ತು ಆರೋಪಿಗಳಲ್ಲಿ ಒಬ್ಬನಾದ ಗಣೇಶ್ ಮೋರೆ ನಡುವೆ ವಾಗ್ವಾದ ನಡೆದಿತ್ತು. ಸ್ಥಳದಿಂದ ಹೊರಡುವ ಮೊದಲು, “ನಿನ್ನನ್ನು ಬಿಡುವುದಿಲ್ಲ” ಎಂದು ಗಣೇಶ್ ಮೋಹಿತೆಗೆ ಬೆದರಿಕೆ ಹಾಕಿದ್ದ. ಈ ಬೆನ್ನಲ್ಲೇ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೋಹಿತೆ ಅವರ ಪತ್ನಿ ಜ್ಯೋತಿ ನೀಡಿದ ದೂರಿನ ಆಧಾರದ ಮೇಲೆ, ಸಾಂಗ್ಲಿಯ ಇಂದಿರಾನಗರ ಪ್ರದೇಶದ ನಿವಾಸಿಗಳಾದ ಗಣೇಶ್ ಮೋರೆ, ಸತೀಶ್ ಲೋಖಂಡೆ, ಶಾರುಖ್ ಶೇಖ್ (ಮೃತ), ಬನ್ಯಾ ಅಲಿಯಾಸ್ ಯಶ್ ಲೋಂಧೆ, ಅಜಯ್ ಘಾಡ್ಗೆ, ಜಿತೇಂದ್ರ ಲೋಂಧೆ, ಯೋಗೇಶ್ ಶಿಂಧೆ ಮತ್ತು ಸಮೀರ್ ಧೋಲೆ ಎಂಬ ಎಂಟು ಜನರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮಹಿಳಾ ಸಿಬ್ಬಂದಿಯ ‘ಮುಟ್ಟು ಸಾಬೀತಿಗೆ ಫೋಟೋ’ ಕೇಳಿದ ಪ್ರಕರಣ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಸ್‌ಸಿಬಿಎ


