HomeUncategorizedಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

- Advertisement -
- Advertisement -

ಈಗಿನ ಸುದ್ದಿ ಬರೀ ಲಾಠಿ -ಬೂಟಿನ ಸದ್ದಿನ ಸುದ್ದಿ. ಅಸ್ಸಾಮಿನೊಳಗ ಸುರು ಆದ ಈ ಸದ್ದು ಈಗ ಎಲ್ಲಾ ಕಡೆ ಝಂಕಾರ ಬೀಟ್ಸ ಜೊತೆ ಕೇಳಲಿಕ್ಕೆ ಹತ್ತೇದ.

ಕಾಲೇಜು- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಅಧ್ಯಯನ ಮಾಡಬೇಕು. ಅದನ್ನ ಬಿಟ್ಟುಕೊಟ್ಟು ಪ್ರತಿಭಟನೆ – ಹೋರಾಟ ಎಲ್ಲಾ ಯಾಕ ಮಾಡಬೇಕು? ಅಂತ ಕೆಲವರು ಕೇಳಾಕ ಹತ್ಯಾರ. ನೀವು ಗದ್ದಲಾ ಮಾಡಿದರ ನಾವು ಬಡೀತೇವಿ ಅಂತ ಹೇಳಿ ಅದು ಖರೇ ಅನ್ನೋದನ್ನ ತೋರಿಸಲಿಕ್ಕೆ ಹತ್ಯಾರ.

ಇದೆಲ್ಲಾ ಯಾಕ ಸುರು ಆತು? ಇದು ಪಾರ್ಲಿಮೆಂಟ ಭವನದಿಂದ ಸುರು ಆತು. ಅಲ್ಲೆ ನಮ್ಮನ್ನ ಪ್ರತಿನಿಧಿಸುವ ಮಹಾಮಹೋಪಾಧ್ಯಾಯರೆಲ್ಲಾ ಸೇರಿ `ಹೊರಗಿನಿಂದ ಬಂದವರನ್ನ ಹಿಡದು ಹೊರಗ ಹಾಕೋ’ ಕಾನೂನು ಖಲಬಲಿಯಿಂದ ಪಾಸು ಮಾಡಿದರು. ಅವರ ಪ್ರಕಾರ ಇದು ಅಸ್ಸಾಮು ಮತ್ತು ಇನ್ನು ಕೆಲವು ಪೂರ್ವ ಹಾಗೂ ಈಶಾನ್ಯದ ರಾಜ್ಯಗಳಿಗೆ ಅನ್ವಯ ಆಗಬೇಕಾಗಿತ್ತು. ಆದರ ಅವರಿಗೆ ಭಾಳ ದೊಡ್ಡ ಮನಸ್ಸು ಇದ್ದದ್ದಕ್ಕ ಇಡೀ ದೇಶಕ್ಕ ಲಾಗೂ ಮಾಡೋ ಹಂಗ ಅದನ್ನ ಮಾಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ರಕ್ತ ಬರೋ ಹಂಗ ಹೊಡದು, ಅವರ ಮ್ಯಾಲೆ ದೌರ್ಜನ್ಯ ಮಾಡಿ ಅವಮಾನ ಮಾಡಿದ್ದನ್ನ ಭಾಳ ಜನಾ ಖಂಡಿಸಲಿಕ್ಕೆ ಹತ್ಯಾರ. ಆದರ ಅದನ್ನ ಬೆಂಬಲಿಸೋರ ಸಂಖ್ಯಾನೂ ಏನು ಕಮ್ಮಿ ಇಲ್ಲ. ಅವರು `ಹಂಗ ಆಗಬೇಕು’, `ದಂಡಂ ದಶಗುಣಂ’, `ಜಿಸಕಿ ಲಾಠ, ಉಸಕೀ ಭೈಂಸ್’ ಅಂತೆಲ್ಲಾ ಸಮಾಜ ವಿರೋಧಿ ಮಾಧ್ಯಮಗಳಾದ ವಾಟ್ಸಪ್ಪು – ಫೇಸುಬುಕ್ಕಿನ್ಯಾಗ ಚೀರಲಿಕ್ಕೆ ಹತ್ಯಾರ. ಈಗ ಆಗಲಿಕ್ಕೆ ಹತ್ತಿದ್ದು ಅವರ ಪ್ರಕಾರ ಸರಿ.

ಇದರ ಬಗ್ಗೆ ಒಂದು ಸ್ವಲ್ಪ ಉಲ್ಟಾ ವಿಚಾರ ಮಾಡೋಣ. ಎನ್‍ಡಿಎ ಸರಕಾರದ ಜಾಗಾದಾಗ ಯುಪಿಎ ಇತ್ತು ಅನಕೋರಿ, ಆಗ ಪೊಲೀಸರು ಬನಾರಸ ಹಿಂದೂ ಯುನಿವರ್ಸಿಟಿ ಒಳಗ ಹೊಕ್ಕು ಹುಡುಗ- ಹುಡುಗಿಯರನ್ನು ಹೊಡದಿದ್ದರೂ ಅಂತ ಅನಕೋರಿ ಆವಾಗನೂ ಅವರದು ಇದ ರೀತಿ ಪ್ರತಿಕ್ರಿಯಾ ಇರತಿತ್ತ? ಈ ನುಡಿಮುತ್ತುಗಳನ್ನ ಬಳಸಿ ಅವರು ಇದನ್ನ ಸಮರ್ಥಿಸಿ ಕೊಳ್ಳತಿದ್ದರೇನು?

ಇಷ್ಟರಾಗ ನಮ್ಮ ಮಹಾಮಹಿಮ ಪಂತ ಪ್ರಧಾನರ ಬಾಯಿಯಿಂದ ಒಂದು ಪವಿತ್ರ ವಾಕ್ಯ ಉದರಿ ಬಿದ್ದದ. ಅದೇನಂದರ ‘ಹಿಂಸಾಕೃತ್ಯಗಳನ್ನ ಮಾಡಲಿಕ್ಕೆ ಹತ್ತವರು ಯಾರು ಅಂತ ಎಲ್ಲಾರಿಗೂ ಗೊತ್ತದ. ಅವರವರು ಹಾಕ್ಕೊಂಡ ಅರಿವಿಯಿಂದ ಗೊತ್ತಾಗೇ ಬಿಡತದ’ ಅಂತ ಅಪರೂಪಕ್ಕ ಒಂದು ಖರೇ ಹೇಳ್ಯಾರ. ಯಾಕಂದರ ಹೊಡದವರು, ಬಡದವರು, ಖಾಕಿ ಸಮವಸ್ತ್ರ ಹಾಕಿಕೊಂಡ ಪೊಲೀಸರು. ದೆಹಲಿ ಪೋಲೀಸರು ದೆಹಲಿ ರಾಜ್ಯದ ಕೆಳಗ ಕೆಲಸ ಮಾಡೋರಲ್ಲ. ನೇರವಾಗಿ ಕೇಂದ್ರ ಸರಕಾರದ ಕೈಕೆಳಗ ದುಡಿಯೋರು. ಅವರ ಚಕ್ರವರ್ತಿ ಅಂದರ ಕೇಂದ್ರದ ಗೃಹ ಮಂತ್ರಿ. ಹಿಂಗಾಗಿ ಹಿಂಸೆಯನ್ನ ಆರ್ಡರ್ ಮಾಡಿದವರು ಯಾರು ಅಂತ ಎಲ್ಲಾರಿಗೂ ಗೊತ್ತಾಗತದ.

ಇನ್ನ ಕೆಲವರು ಟೀ ಷರ್ಟು – ಜೀನ್ಸ ಪ್ಯಾಂಟ್ ಹಕ್ಕೊಂಡು, ಪೊಲೀಸರ ಹೆಲ್ಮೇಟು, ಮುಖದ ಮ್ಯಾಲೆ ಮುಸುಗು ಹಾಕಿಹೊಂಡು ಸಣ್ಣಸಣ್ಣ ಹುಡುಗಿಯರನ್ನು ಹುಡುಕಿಹುಡುಕಿ ದೊಡ್ಡ ದೊಡ್ಡ ಲಾಠಿ ತೊಗೊಂಡು ಹೊಡದಾರ. ಅವರ ಅರಿವಿ ನೋಡಿದರ ಅವರು ಯಾರು ಅಂತ ಇನ್ನೋ ಗೊತ್ತಾಗವಲ್ಲದು. ಇನ್ನೇನು ಇನ್ನೊಂದು ಸ್ವಲ್ಪ ದಿವಸದಾಗ ಗೊತ್ತಾಗತದ. ನಮ್ಮ ನಾಯಕರು ದಾಡಿ- ಪೈಜಾಮಾ- ಬುರ್ಖಾ ಮನಸಿನ್ಯಾಗ ಇಟಗೊಂಡು ಹೇಳಿದ್ದರೋ ಏನೋ. ನಮಗಂತೂ ಅಂಥಾ ಅರಿವಿ ಕಾಣಲಿಲ್ಲ.

ಇಷ್ಟು ಎಲ್ಲದಕ್ಕೂ ಕಾರಣ ಏನು? ಹೊರಗಿನಿಂದ ಬಂದವರನ್ನು ಹೊರಗ ಹಾಕೋ ಹೆಸರಿನ್ಯಾಗ ನಮ್ಮ ಅಣ್ಣತಮ್ಮಂದಿರನ್ನ ಬ್ಯಾರೆ ಮಾಡೋ ಪಿತೂರಿ ನಡದದ.

ಭಾರತದ ವಿಭಜನಾ 1947 ಆದಾಗ ಹಾಗೂ ಪಾಕಿಸ್ತಾನದ ವಿಭಜನಾ 1971 ರೊಳಗ ಭಾಳ ಕುಟುಂಬ ಈ ನಾಲ್ಕೂ ದೇಶಗಳ ಗಡಿ ದಾಟಿ ಹೋದರು, ಬಂದರು. ಅವರು ಈಗ 50-70 ವರ್ಷಗಳಿಂದ ಈ ದೇಶದ ನೀರು ಕುಡದು, ಇಲ್ಲೆ ಮಣ್ಣಿನ್ಯಾಗ ಬೆವರು ಸುರಿಸಿಕೊಂಡು, ದುಡಕೊಂಡು, ದುಃಖ ಪಟಕೊಂಡು ಇದ್ದಾರ. ಇಷ್ಟು ವರ್ಷ ಆಗಲಾರದ ಈ ನಿರಾಶ್ರಿತರ ಸಮಸ್ಯಾ ಈಗ ಬಂದಂಗ ಕಾಣತದ. ಯಾಕಂದರ ಈ ದೇಶದಾಗ ಯಾವ ಸಮಸ್ಯೆನೂ ಇಲ್ಲ ಈಗ. ಬಡತನಾ ಇಲ್ಲ, ಹಸಿವು ಇಲ್ಲಾ, ನಿರಕ್ಷರತೆ ಇಲ್ಲಾ, ದೌರ್ಜನ್ಯ ಇಲ್ಲ, ಬಾಲ್ಯವಿವಾಹ ಇಲ್ಲ, ದೇವದಾಸಿ ಪದ್ಧತಿ ಇಲ್ಲ, ಬಾಲ ಕಾರ್ಮಿಕರು ಇಲ್ಲ, ಯಾವುದೇ ರೋಗ – ರುಜಿನ ಇಲ್ಲ, ಎಲ್ಲರಿಗೂ ಬೇಕಾದಷ್ಟು ಶಿಕ್ಷಣ ಸಿಕ್ಕದ, ಸಾಕಷ್ಟು ಉದ್ಯೋಗ ಅವ. ನಮ್ಮ ಆರ್ಥಿಕತೆ ಐದೋ – ಆರೋ ಟ್ರಿಲಿಯನ್ ಡಾಲರ್ ಕಡೆ ದಾಪುಗಾಲು ಹಾಕಲಿಕ್ಕೆ ಹತ್ತೇದ. ಹಿಂಗಾಗಿ ಇವೆಲ್ಲಾ.

ಹಿಂಗಾಗಿ ನಾಗರಿಕತೆ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ ಅಂತೆಲ್ಲಾ ಅವರನ್ನ ಹುಡುಕೋದು, ಕುತಗೀ ಹಿಡದು ಹೊರಗ ಹಾಕೋದು ಇಂಥಾ ವಿಚಾರ ನಡದದ. ಇದು ಉಚ್ಚ ಶಿಕ್ಷಣ ಪಡದ ವಿದ್ಯಾರ್ಥಿಗಳಿಗೆ ಮನಸು ಬರವಲ್ಲತು. ಹಿಂದೂ – ಮುಸ್ಲಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರಾಣದ ಆಹುತಿ ಪಡದ ಮ್ಯಾಲೆ ಈ ದೇಶ ಪ್ರಜಾತಂತ್ರ ಆಗೇದ. ಈಗ ಅದನ್ನ ಧರ್ಮದ ಆಧಾರದ ಮ್ಯಾಲೆ ಒಡದು ಹಾಕಿದರ ಜನಸತ್ತಾ ಹೋಗಿ ಜನಾ ಸತ್ತಾರ ಆಗತದ ಅಂತ ಅವರ ಚಿಂತಿ.

ಅದಕ್ಕೆ ಈ ದೇಶ ಬರೇ ಹಿಂದೂಗಳದ್ದಲ್ಲ. ಬರೇ ಮೇಲುಜಾತಿಯವರದಲ್ಲ, ಬರೇ ಸಾಹುಕಾರರದ್ದಲ್ಲ. ಬರೇ ಗಂಡಸರದಲ್ಲ, ಬರೇ ಅಧಿಕಾರಸ್ಥರದಲ್ಲ, ಬರೇ ಜಮೀನುದಾರರು, ವ್ಯಾಪಾರಸ್ಥರು, ಕಾರಖಾನಿ ಮಾಲಿಕರದ್ದಲ್ಲ, ಇದು ಎಲ್ಲರಿಗೂ ಸೇರಿದ್ದು. ಐದು ಸಾವಿರ ವರ್ಷದ ಶ್ರೀಮಂತ ಬಹು ಸಾಂಸ್ಕøತಿಕ ನಾಗರಿಕತೆಯನ್ನು ಬರೇ ಐದು ವರ್ಷ ಆಳಲಿಕ್ಕೆ ಪರವಾನಗಿ ಪಡದು ಬಂದಿರೋರು ಹಾಳು ಮಾಡಬಾರದು ಅಂತ ಅವರ ಆಸೆ. ನಮ್ಮ ಯಾರನ್ನೂ ಸಾಕ್ಷ್ಯ, ಪ್ರಮಾಣ, ಗುರುತು, ಪುರಾವೆ ಕೇಳಬ್ಯಾಡರಿ. ಅಣ್ಣ- ತಮ್ಮಂದಿರಿಗೆ ಅಣ್ಣಾ ತಮ್ಮನಂಗ ಇರಲಿಕ್ಕೆ ಬಿಡರಿ ಅಂತ ಅವರ ಬೇಡಿಕೆ.

ಈ ಗುಂಗಿನ್ಯಾಗ ಶಾಯರಿ ಸರದಾರ ರಾಹತ್ ಇಂದೋರಿ ಅವರ ಒಂದು ಗಜಲ್ ಕೇಳೋಣು. ಏನಂತೀ?

ಏನು ?
ವಿರೋಧ ಮಾಡ್ತಾರಂತ?
ಮಾಡ್ಲಿ ಬಿಡು,
ಅವರೇನೀಗ
ನಮಗ ಜೀವಕ್ಕ ಜೀವಾ
ಕೊಡವರದಾರು? ಇಲ್ಲಲಾ?

ಇದೆಲ್ಲಾ ಬರೇ ಹೊಗಿ
ಬರೇ ಒಣಾ ಧೂಳು-ಹೊಗಿ ಅಷ್ಟ.
ಇದನ್ನ ಏನರ
ಮುಗಲು ಅಂತ ತಿಳ್ಕೊಂಡೀಯೇನು ಮತ್ತ?
ಇಲ್ಲಲಾ?

ಒಮ್ಮೆ ಬೆಂಕಿ ಬಿತ್ತೆಪಾ ಅಂದರ
ಕಿವಿ ತುಂಬುವಂಗ
ಕೆಟ್ಟ ಸುದ್ದಿ ಬರ್ತಾವ ನೋಡು
ಮನಿ ಎಲ್ಲಾ ಉರಕೊಂಡು ಬಿದ್ದಿದ್ದು,
ಬಾಯಿಬಾಯಿ ಬಡಕೊಂಡು ಅಳೋದು,
ಗೊತೈತಿಲ್ಲ?
ಇಲ್ಲೇನು ಬರೇ
ನಮ್ಮವ ಮನೀ
ಅದಾವೇನು?
ಇಲ್ಲಲಾ?

ನೋಡಪಾ ಯಪ್ಪಾ
ನಮ್ಮ ಬಾಯಾಗ ಬಂದದ್ದ ಮಾತೆಲ್ಲಾ
ಖರೇನ ಇರತೇತಿ
ನಮ್ಮ ಬಾಯಾಗೇನರ
ನಿಮ್ಮ ನಾಲಿಗಿ ಐತೇನ?
ಇಲ್ಲಲಾ?

ನಮ್ಮ ದುಷ್ಮನಗಳೇನೂ
ಕಮ್ಮಿ ಇಲ್ಲ ಅನ್ನೋದು
ನನಗ ಗೊತೈತಿ
ಆದರ ನಮ್ಮಂಗ ಅವರೇನು
ಮುಟಿಗ್ಯಾಗ
ಜೀವಾ ಇಟಗೊಂಡ
ಹೊಂಟಾರೇನು?
ಇಲ್ಲಲಾ?

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ನಾಳೆ ಇರಂಗಿಲ್ಲಾ
ಅವರು ಇಲ್ಲೆ
ಬಾಡಗೀಲೆ ಇರಾಕ ಬಂದಾವ್ರು
ಏನು ಈ ಮನಿ
ಇವರ ಸ್ವಂತದ್ದೇನು?
ಅಲ್ಲಲಾ?

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ
ಈ ಮಣ್ಣು
ಯಾರದರ
ಅಪ್ಪನ ಮನೀದೇನು
ಈ ಹಿಂದುಸ್ತಾನಾ?
ಅಲ್ಲಲಾ?

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...