ಬಿಹಾರ ವಿಧಾನಸಭಾ ಚುನಾವಣೆ ‘ಆರಂಭದಿಂದಲೂ ನ್ಯಾಯಯುತವಾಗಿರಲಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ (ನವೆಂಬರ್ 14) ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸೋಲನುಭವಿಸಿದ ಕೆಲ ಗಂಟೆಗಳ ಬಳಿಕ ವಿಪಕ್ಷ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಮೇಲಿನ ಹೇಳಿಕೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಶುಕ್ರವಾರ (ನವೆಂಬರ್ 14) ಪ್ರಕಟಗೊಂಡಿದೆ. ಎನ್‌ಡಿಎ ಒಕ್ಕೂಟ ಮತ್ತೊಮ್ಮೆ ಅಭೂತಪೂರ್ವ ಗೆಲುವು ದಾಖಲಿಸಿದೆ. ಒಕ್ಕೂಟದ ಪ್ರಮುಖ ಪಕ್ಷ ಬಿಜೆಪಿ 89 ಸ್ಥಾನಗಳನ್ನು ಪಡೆದಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿ (ಯು) 85 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಒಕ್ಕೂಟದ ಮತ್ತೊಂದು ಪಕ್ಷ ಎಲ್‌ಜೆಪಿ (ರಾಮ್ ವಿಲಾಸ್) 19 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಇತ್ತ ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ಕೇವಲ 6 ಸ್ಥಾನಗಳಿಗೆ ತೃಪ್ತಿಪಡೆದುಕೊಂಡಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ 24 ಸ್ಥಾನಗಳನ್ನು ಗಳಿಸಿದೆ. ಸಿಪಿಐ (ಎಂಎಲ್) (ಎಲ್) ಎರಡು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 2020ರ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 6 ಕುಸಿದಿದೆ.
ಶುಕ್ರವಾರ ಸಂಜೆ ಹಾಕಿದ ಪೋಸ್ಟ್‌ನಲ್ಲಿ ವಿರೋಧ ಪಕ್ಷಗಳ ಮಹಾಘಟಬಂಧನ್ ಒಕ್ಕೂಟದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಮತದಾರರಿಗೆ ರಾಹುಲ್ ಗಾಂಧಿ ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಫಲಿತಾಂಶ ನಿಜವಾಗಿಯೂ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
“ಆರಂಭದಿಂದಲೂ ನ್ಯಾಯಯುತವಾಗಿರದ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ” ಎಂದಿದ್ದಾರೆ.
“ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮಾಡುತ್ತಿರುವ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಒಕ್ಕೂಟ ಬಿಹಾರದ ಫಲಿತಾಂಶವನ್ನು ಆಳವಾಗಿ ಪರಿಶೀಲನೆ ನಡೆಸಲಿದೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇನ್ನಷ್ಟು ಪರಿಣಾಮಕಾರಿ ಪ್ರಯತ್ನ ಮಾಡಲಿದೆ” ಎಂದು ಬರೆದುಕೊಂಡಿದ್ದಾರೆ.
मैं बिहार के उन करोड़ों मतदाताओं का हार्दिक आभार व्यक्त करता हूं, जिन्होंने महागठबंधन पर अपना विश्वास जताया।
बिहार का यह परिणाम वाकई चौंकाने वाला है। हम एक ऐसे चुनाव में जीत हासिल नहीं कर सके, जो शुरू से ही निष्पक्ष नहीं था।
यह लड़ाई संविधान और लोकतंत्र की रक्षा की है। कांग्रेस…
— Rahul Gandhi (@RahulGandhi) November 14, 2025
“ಬಿಹಾರದ ಚುನಾವಣಾ ಫಲಿತಾಂಶ ನಿಸ್ಸಂದೇಹವಾಗಿ ಬೃಹತ್ ಪ್ರಮಾಣದಲ್ಲಿ ಮತ ಕಳ್ಳತನವನ್ನು ಪ್ರತಿಬಿಂಬಿಸುತ್ತದೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ರಾತ್ರಿ ಹೇಳಿದ್ದಾರೆ. ಇದು ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಚುನಾವಣಾ ಆಯೋಗದ ಮಾಸ್ಟರ್ ಮೈಂಡ್ ಎಂದು ಅವರು ಆರೋಪಿಸಿದ್ದಾರೆ.
ಕಳೆದ ವರ್ಷ ನಡೆದ ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಈಗಾಗಲೇ ಆರೋಪಿಸಿದ್ದಾರೆ.
2024ರ ಲೋಕಸಭೆ ಚುನಾವಣೆ ವೇಳೆ ಬೆಂಗಳೂರು ಕೇಂದ್ರ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಮತ್ತು 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ನಡೆದ ಮತಗಳ್ಳತನ ಕುರಿತು ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ರಾಹುಲ್ ಗಾಂಧಿ ಒಟ್ಟು 3 ಬಾರಿ ದೆಹಲಿಯಲ್ಲಿ ದೊಡ್ಡ ಮಟ್ಟದ ಪತ್ರಿಕಾಗೋಷ್ಠಿ ನಡೆಸಿ ಮತಗಳ್ಳತನ ಆರೋಪಗಳನ್ನು ಮಾಡಿದ್ದಾರೆ. ಚುನಾವಣಾ ಆಯೋಗ ಪ್ರತೀ ಬಾರಿಯೂ ಅವರ ಆರೋಪಗಳನ್ನು ನಿರಾಕರಿಸಿಕೊಂಡು ಬಂದಿದೆ.
ಚುನಾವಣಾ ಆಯೋಗವು ನಕಲಿ ಮತದಾರರನ್ನು ತೆಗೆದುಹಾಕದೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಮಾಡುವ ಮೂಲಕ ಸಾಕ್ಷ್ಯಗಳನ್ನು ಮುಚ್ಚಿಹಾಕಿ ಬಿಜೆಪಿಗೆ ಚುನಾವಣೆ ಗೆಲ್ಲಲು ಸಹಾಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ: ಕೊಲೆ ಆರೋಪಿ ಅನಂತ್ ಸಿಂಗ್ ಗೆ ಮೊಕಾಮಾದಲ್ಲಿ ಭರ್ಜರಿ ಗೆಲುವು


