ಬ್ರೆಝಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ 30ನೇ ವಿಶ್ವ ಹವಾಮಾನ ಶೃಂಗಸಭೆ (COP30)ಯಲ್ಲಿ ಭಾಗವಹಿಸಿರುವ ಪ್ರತಿ 25 ಜನರಲ್ಲಿ ಒಬ್ಬರು ಪಳೆಯುಳಿಕೆ ಇಂಧನ ಲಾಬಿದಾರ ಇದ್ದಾರೆ. ಶೃಂಗಸಭೆ ನಡೆಯುತ್ತಿರುವ ಆವರಣದಲ್ಲಿ ಒಟ್ಟು 1,602 ಲಾಬಿದಾರರು ಪತ್ತೆಯಾಗಿದ್ದಾರೆ ಎಂದು ಕಿಕ್ ಬಿಗ್ ಪೊಲ್ಯೂಟರ್ಸ್ ಔಟ್ (ಕೆಬಿಪಿಒ) ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಕಲ್ಲಿದ್ದಲು, ಕಲ್ಲಿದ್ದಲು ಉತ್ಪನ್ನಗಳು, ನೈಸರ್ಗಿಕ ಅನಿಲ, ಉತ್ಪಾದಿಸಿದ ಅನಿಲ, ಕಚ್ಛಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನವೀಕರಿಸಲಾಗದ ತ್ಯಾಜ್ಯಗಳಂತಹ ಇಂಧನ ಮೂಲಗಳನ್ನು ಪಳೆಯುಳಿಕೆ ಇಂಧನ ಎಂದು ಕರೆಯಲಾಗುತ್ತದೆ.
ಕೆಬಿಪಿಒ ಎಂಬುದು 450ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವಾಗಿದ್ದು, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಹೆಚ್ಚು ಕಾರಣರಾದವರೇ ಹವಾಮಾನ ಸಂಬಂಧಿತ ನಿಯಮ ರೂಪಿಸುವುದನ್ನು ಈ ಒಕ್ಕೂಟ ವಿರೋಧಿಸುತ್ತದೆ. ಪ್ರತಿ ವರ್ಷ, ಒಕ್ಕೂಟವು ವಾರ್ಷಿಕ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪಳೆಯುಳಿಕೆ ಇಂಧನ ಲಾಬಿ ಮಾಡುವವರ ಸಂಖ್ಯೆಯನ್ನು ವಿಶ್ಲೇಷಿಸುತ್ತದೆ. ಈ ವರ್ಷವೂ, ಒಕ್ಕೂಟ ಸಿಒಪಿ-30ರಲ್ಲಿ ಭಾಗವಹಿಸಿದ ಲಾಬಿದಾರರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
🔎 🛢️ One in every 25 attendees at the #COP30 #climate talks in #Brazil is a lobbyist representing the fossil fuels industry, according to a report published by the Kick Big Polluters Out (KBPO) coalition on Thursday.
For the latest updates: https://t.co/Yoy1RKTojQ pic.twitter.com/cy6HUDdOiP
— FRANCE 24 English (@France24_en) November 14, 2025
ಕೆಬಿಪಿಒ ವಿಶ್ಲೇಷಣೆಯ ಪ್ರಕಾರ, 1,602 ಪಳೆಯುಳಿಕೆ ಇಂಧನ ಲಾಬಿದಾರರು ಸಿಒಪಿ-30ರಲ್ಲಿ ಭಾಗವಹಿಸಿದ್ದಾರೆ. ಯಾವುದೇ ದೇಶದ ಪ್ರತಿನಿಧಿ ನಿಯೋಗದಲ್ಲಿಯೂ ಇಷ್ಟು ಜನರಿಲ್ಲ. ಬ್ರೆಝಿಲ್ ಮಾತ್ರ ಹೆಚ್ಚು, ಅಂದರೆ 3,805 ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಕಳುಹಿಸಿದೆ.
ಕಳೆದ ವರ್ಷ ಆಝರ್‌ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನಡೆದ ಸಿಒಪಿ-29ರಲ್ಲಿ ಭಾಗವಹಿಸಿದ್ದಕ್ಕಿಂತ ಈ ಬಾರಿ ಶೇಕಡ 12ರಷ್ಟು ಹೆಚ್ಚು ಲಾಬಿದಾರರು ಸಮ್ಮೇಳನಕ್ಕೆ ಹಾಜರಾಗಿದ್ದಾರೆ. ನಾವು ಲಾಬಿದಾರರ ಬಗ್ಗೆ ವಿಶ್ಲೇಷಣೆ ಮಾಡಲು ಪ್ರಾರಂಭಿಸಿದ ಬಳಿಕ ಈ ಬಾರಿ ಅತಿ ಹೆಚ್ಚು ಲಾಬಿದಾರರು ಕಂಡು ಬಂದಿದ್ದಾರೆ ಎಂದು ಕೆಬಿಪಿಒ ಹೇಳಿದೆ.
ಹತ್ತು ಅತ್ಯಂತ ಹವಾಮಾನ ದುರ್ಬಲ ರಾಷ್ಟ್ರಗಳ ಎಲ್ಲಾ ಪ್ರತಿನಿಧಿಗಳಿಗಿಂತ (1,061) ಪಳೆಯುಳಿಕೆ ಇಂಧನ ಲಾಬಿದಾರರು ಸಿಒಪಿ-30ಕ್ಕೆ ಮೂರನೇ ಎರಡರಷ್ಟು ಹೆಚ್ಚು ಪಾಸ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಹೊರಸೂಸುವಿಕೆ ವ್ಯಾಪಾರ ಸಂಘವು ತೈಲ ಮತ್ತು ಅನಿಲ ದೈತ್ಯ ಕಂಪನಿಗಳಾದ ಎಕ್ಸಾನ್‌ಮೊಬಿಲ್, ಬಿಪಿ ಮತ್ತು ಟೋಟಲ್ ಎನರ್ಜೀಸ್‌ನ ಪ್ರತಿನಿಧಿಗಳು ಸೇರಿದಂತೆ 60 ಪ್ರತಿನಿಧಿಗಳನ್ನು ಸಿಒಪಿ-30ಕ್ಕೆ ಕರೆತಂದಿದೆ ಎಂದು ಕೆಬಿಪಿಒ ತಿಳಿಸಿದೆ.
ಕೆಬಿಪಿಒ ಪ್ರಕಾರ, ಜಾಗತಿಕ ಉತ್ತರದ ಕೆಲವು ದೇಶಗಳು ತಮ್ಮ ಅಧಿಕೃತ ನಿಯೋಗಗಳಲ್ಲಿ ಪಳೆಯುಳಿಕೆ ಇಂಧನ ಪ್ರತಿನಿಧಿಗಳನ್ನು ಕೂಡ ಒಳಗೊಳಿಸಿವೆ. ಉದಾಹರಣೆಗೆ, ಫ್ರಾನ್ಸ್ 22 ಪಳೆಯುಳಿಕೆ ಇಂಧನ ಪ್ರತಿನಿಧಿಗಳನ್ನು ಕರೆತಂದಿದೆ. ಇದರಲ್ಲಿ ಸಿಇಒ ಪ್ಯಾಟ್ರಿಕ್ ಪೌಯಾನ್ನೆ ಸೇರಿದಂತೆ ಟೋಟಲ್ ಎನರ್ಜಿಸ್‌ನಿಂದ ಐದು ಮಂದಿ ಇದ್ದಾರೆ.
“ಸಮಸ್ಯೆ ಉಂಟುಮಾಡಿದವರಿಗೆ ಅಧಿಕಾರ ನೀಡುವ ಮೂಲಕ ನೀವು ಅದನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನ” ಎಂದು ಕೆಬಿಪಿಒ ಸದಸ್ಯ ಜಾಕ್ಸ್ ಬಾನ್ಬನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಮೂರು ದಶಕಗಳು ಮತ್ತು 30 ಸಿಒಪಿಗಳ ನಂತರವೂ, 1,500ಕ್ಕೂ ಹೆಚ್ಚು ಪಳೆಯುಳಿಕೆ ಇಂಧನ ಲಾಬಿಗಾರರು ಹವಾಮಾನ ಮಾತುಕತೆಗಳಲ್ಲಿ ತಾವು ಇಲ್ಲಿಗೆ ಸೇರಿದವರಂತೆ ಅಲೆದಾಡುತ್ತಿದ್ದಾರೆ. ಸಿಒಪಿ 30 ‘ಅನುಷ್ಠಾನ ಸಿಒಪಿ’ ಎಂದು ಭರವಸೆ ನೀಡುತ್ತದೆ. ಆದರೆ, ಇದುವರೆಗೆ ಅವರು ಸೃಷ್ಟಿಸಿದ ಬಿಕ್ಕಟ್ಟನ್ನು ಪರಿಹರಿಸಲು ಉದ್ದೇಶಿಸಲಾದ ಸಮ್ಮೇಳನದಿಂದ ದೊಡ್ಡ ಮಾಲಿನ್ಯಕಾರಕಗಳನ್ನು ಹೊರಹಾಕುವ ಮೂಲಭೂತ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಯನ್ನು ಸಹ ಕಾರ್ಯಗತಗೊಳಿಸಲು ಇದು ವಿಫಲವಾಗಿದೆ” ಎಂದು ಹೇಳಿದ್ದಾರೆ.
ನವೆಂಬರ್ 6 ರಿಂದ 21 (ನವೆಂಬರ್ 6 ರಿಂದ 9 ರಿಂದ ಪೂರ್ವಸಿದ್ಧತಾ ಕಾರ್ಯಕ್ರಮಗಳು, ನವೆಂಬರ್ 10 ರಿಂದ 21 ರಿಂದ ಮುಖ್ಯ ಸಮ್ಮೇಳನ) ರವರೆಗೆ ಬ್ರೆಝಿಲ್‌ನ ಬೆಲೆಮ್‌ನಲ್ಲಿ ಈ ಬಾರಿಯ ವಿಶ್ವ ಹವಾಮಾನ ಶೃಂಗಸಭೆ ನಡೆಯುತ್ತಿದೆ.
ಭೂತಾನ್‌ನ ಇಂಧನ ಯೋಜನೆಗಳಿಗೆ 4 ಸಾವಿರ ಕೋಟಿ ಸಾಲ ಘೋಷಿಸಿದ ಮೋದಿ : ಅದಾನಿ, ಅಂಬಾನಿ ಕಂಪನಿಗಳಿಂದ ಒಪ್ಪಂದಕ್ಕೆ ಸಹಿ


