ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಸೋಮವಾರ (ನವೆಂಬರ್ 17) ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಕಳೆದ ವರ್ಷದ ವಿದ್ಯಾರ್ಥಿ ನೇತೃತ್ವದ ಆಂದೋಲನದ ಸಂದರ್ಭದಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.
ವಿದ್ಯಾರ್ಥಿ ನೇತೃತ್ವದ ಆಂದೋಲನ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ಮೂವರು ಸದಸ್ಯರ ನ್ಯಾಯಮಂಡಳಿಯು ಹಸೀನಾ ಅವರ ಇಬ್ಬರು ಸಹಾಯಕರಾದ ಮಾಜಿ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ವಿರುದ್ಧವೂ ಇದೇ ಅಪರಾಧಗಳ ಮೇಲೆ ತೀರ್ಪು ಪ್ರಕಟಿಸಿದೆ. ಮಾಮುನ್ ಅವರನ್ನು ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿತ್ತು.
ತೀರ್ಪು ಪ್ರಕಟಿಸುವಾಗ, ಪ್ರಾಸಿಕ್ಯೂಟರ್‌ಗಳು ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿದರು. ಈ ವೇಳೆ, ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಆರೋಪಿಗಳು ‘ಗರಿಷ್ಠ ಶಿಕ್ಷೆ’ಗೆ ಅರ್ಹರು ಎಂದು ನ್ಯಾಯಮಂಡಳಿ ಹೇಳಿತು ಎಂದು ವರದಿಗಳು ತಿಳಿಸಿವೆ.
(ಐಸಿಟಿ-ಬಿಡಿ) ಮುಖ್ಯ ನ್ಯಾಯಾಧೀಶರು, ಹಸೀನಾ ಪ್ರತಿಭಟನಾಕಾರರ ವಿರುದ್ಧ ಹೆಲಿಕಾಪ್ಟರ್, ಡ್ರೋನ್ ಮತ್ತು ಮಾರಕ ಆಯುಧಗಳನ್ನು ಬಳಸಲು ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ. ದಕ್ಷಿಣ ಢಾಕಾ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ನಿರ್ದೇಶನ ಬಹಿರಂಗವಾಗಿದೆ. ವಿಧಿವಿಜ್ಞಾನ ಪರೀಕ್ಷೆಯು ಸಿಡಿ ಮತ್ತು ರೆಕಾರ್ಡಿಂಗ್ ನಿಜವೆಂದು ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ಢಾಕಾ ವಿಶ್ವವಿದ್ಯಾಲಯದ ಕುಲಪತಿಯೊಂದಿಗಿನ ಅವರ ಸಂಭಾಷಣೆಯ ದಾಖಲೆಗಳು ಲಭ್ಯವಿರುವುದನ್ನು ತಿಳಿಸಿದ ನ್ಯಾಯಮಂಡಳಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕೊಲ್ಲಲು ಹಸೀನಾ ಆದೇಶಿಸಿದ್ದಾರೆ ಎಂದಿದೆ.
ಹಸೀನಾ ವಿದ್ಯಾರ್ಥಿ ಚಳವಳಿಯನ್ನು ದುರ್ಬಲಗೊಳಿಸಿದ್ದಾರೆ. ಅವರು ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ‘ರಜಾಕರು’ ಎಂದು ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ ಎಂದು ತಿಳಿಸಿದ್ದಾರೆ.
ಜುಲೈ 14, 2024ರ ರಾತ್ರಿ, ಢಾಕಾ ವಿಶ್ವವಿದ್ಯಾಲಯದ ಉಪಕುಲಪತಿಯೊಂದಿಗೆ ಮಾತನಾಡಿ ಹಸೀನಾ, “ನಾನು ರಜಾಕಾರರನ್ನು ಗಲ್ಲಿಗೇರಿಸಿದ್ದೇನೆ, ಅವರನ್ನು [ಪ್ರತಿಭಟನಾಕಾರರನ್ನು] ಕೂಡ ಗಲ್ಲಿಗೇರಿಸಲಾಗುವುದು. ಅವರಲ್ಲಿ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ. “ನಾನು ಅವರ ಬಂಧನ ಮತ್ತು ಕ್ರಮಕ್ಕೆ ಆದೇಶಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.
ಹಸೀನಾ, ಮಾಜಿ ಗೃಹ ಸಚಿವ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಪ್ರತಿಭಟನಾಕಾರರನ್ನು ಕೊಲ್ಲಲು ಮತ್ತು ನಿಗ್ರಹಿಸಲು ಜಂಟಿಯಾಗಿ ಕೆಲಸ ಮಾಡಿದ್ದಾರೆ. ಹಸೀನಾ ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಶಕೀಲ್ ಎಂಬ ಸಹಾಯಕನಿಗೆ ಫೋನ್ ಕರೆ ಮಾಡಿ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ 226 ಜನರನ್ನು ಕೊಲ್ಲುವಂತೆ ಕೇಳಿಕೊಂಡಿದ್ದಾರೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಹೈ ಅಲರ್ಟ್, ಭದ್ರತೆ ಹೆಚ್ಚಳ
ನ್ಯಾಯಮಂಡಳಿಯ ತೀರ್ಪಿಗೂ ಮುನ್ನ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ಇತರೆಡೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ತೀರ್ಪಿನ ವಿರುದ್ಧ ಪ್ರತಿಭಟಿಸಲು ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಸೋಮವಾರ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದರಿಂದ, ನ್ಯಾಯಮಂಡಳಿಯನ್ನು “ಕಾಂಗರೂ ನ್ಯಾಯಾಲಯ” ಎಂದು ಕರೆದಿದ್ದರಿಂದ, ಢಾಕಾ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ಅರೆಸೈನಿಕ ಗಡಿ ಕಾವಲುಗಾರರು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
2024ರ ಜುಲೈ ಮತ್ತು ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ಸಂದರ್ಭದಲ್ಲಿ ನೂರಾರು ಜನರನ್ನು ಕೊಂದಿದ್ದಕ್ಕಾಗಿ ಹಸೀನಾ ಮತ್ತು ಗೃಹ ಸಚಿವ ಖಾನ್ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯಲ್ಲಿ ಹಿಂಸಾಚಾರದಲ್ಲಿ 1,400 ಜನರು ಸಾವನ್ನಪ್ಪಿರಬಹುದು ಎಂದು ಹೇಳಿದ್ದರೆ, ಮಧ್ಯಂತರ ಸರ್ಕಾರದ ಅಡಿಯಲ್ಲಿ ದೇಶದ ಆರೋಗ್ಯ ಸಲಹೆಗಾರರು 800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 14,000 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರನ್ನೂ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಗಿದೆ.
ಸೋಮವಾರ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದ ನಂತರ ಹಸೀನಾ ಅವರ ಪಕ್ಷವು ದೇಶವ್ಯಾಪಿ ಬಂದ್‌ಗೆ ಕರೆ ನೀಡಿದೆ. ಆ ಬಳಿಕ ದೇಶದಾದ್ಯಂತ ಕಚ್ಚಾ ಬಾಂಬ್‌ಗಳ ಸ್ಫೋಟಗಳು ಮತ್ತು ಬೆಂಕಿ ಹಚ್ಚುವಿಕೆ ಮತ್ತು ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸಿದ ಬಗ್ಗೆ ಬಗ್ಗೆ ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ನ್ಯಾಯಮಂಡಳಿ ಸಭೆ ಸೇರಲು ಸಜ್ಜಾಗುತ್ತಿದ್ದಂತೆ, ಹಿಂದಿನ ಆಡಳಿತ ಪಕ್ಷವು ಮತ್ತೆ ಬಂದ್‌ಗೆ ಕರೆ ನೀಡಿದೆ. ತೀರ್ಪಿನ ಬಗ್ಗೆ ಆತಂಕ ಪಡಬೇಡಿ ಎಂದು ಹಸೀನಾ ತಮ್ಮ ಬೆಂಬಲಿಗರಿಗೆ ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ. 1981 ರಿಂದೀಚೆಗೆ ಅವರ ದಶಕಗಳ ರಾಜಕೀಯ ಜೀವನದಲ್ಲಿ ಹಸೀನಾ ಕನಿಷ್ಠ 19 ಹತ್ಯೆ ಪ್ರಯತ್ನಗಳಿಂದ ಬದುಕುಳಿದಿದ್ದಾರೆ.
ಢಾಕಾದಲ್ಲಿ ಭಾನುವಾರ ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಸಲಹೆಗಾರನ ಮನೆಯ ಮುಂದೆ ಒಂದು ಸೇರಿದಂತೆ ಕಚ್ಚಾ ಬಾಂಬ್‌ಗಳ ಹೊಸ ಸ್ಫೋಟಗಳು ಸಂಭವಿಸಿವೆ ಎಂಬ ಸ್ಥಳೀಯ ಮಾಧ್ಯಮ ವರದಿಗಳು ಹೇಳುವೆ. ಈ ನಡುವೆ ತೀರ್ಪು ಬಂದಿದೆ.
ಢಾಕಾದ ಪೊಲೀಸ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಸಜ್ಜತ್ ಅಲಿ ಅವರು ಯಾರಾದರೂ ವಾಹನಗಳಿಗೆ ಬೆಂಕಿ ಹಚ್ಚಲು ಅಥವಾ ಕಚ್ಚಾ ಬಾಂಬ್‌ಗಳನ್ನು ಎಸೆಯಲು ಪ್ರಯತ್ನಿಸಿದರೆ ‘ಕಂಡಲ್ಲಿ ಗುಂಡು ಹಾರಿಸಿ’ ಎಂದು ಆದೇಶ ಹೊರಡಿಸಿದ್ದಾರೆ. ಕಳೆದ ವಾರದಲ್ಲಿ ದೇಶಾದ್ಯಂತ ಸುಮಾರು 50ಕ್ಕೂ ಹೆಚ್ಚು ಬೆಂಕಿ ದಾಳಿಗಳು ವರದಿಯಾಗಿದೆ. ಹೆಚ್ಚಾಗಿ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಬೆಂಕಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಸುಪ್ರೀಂ ಕೋರ್ಟ್‌ನ ಅಧಿಕಾರಿಗಳು ಭಾನುವಾರ ಸೇನಾ ಪ್ರಧಾನ ಕಚೇರಿಗೆ ಬರೆದ ಪತ್ರದಲ್ಲಿ, ತೀರ್ಪಿನ ಮೊದಲು ನ್ಯಾಯಮಂಡಳಿ ಆವರಣದ ಸುತ್ತಲೂ ಸೈನಿಕರನ್ನು ನಿಯೋಜಿಸುವಂತೆ ಕೋರಿದ್ದಾರೆ. ನ್ಯಾಯಮಂಡಳಿಯ ತೀರ್ಪಿನ ಚರ್ಚೆಯನ್ನು ಸರ್ಕಾರಿ ಸ್ವಾಮ್ಯದ ಬಾಂಗ್ಲಾದೇಶ ದೂರದರ್ಶನ ಮತ್ತು ಇತರ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಬಹುದು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಕಳೆದ ವರ್ಷ ಆಗಸ್ಟ್ 5ರಂದು ಹಸಿನಾ ಅವರನ್ನು ಪದಚ್ಯುತಗೊಳಿಸಿದ ನಂತರ, ಅವರು ಭಾರತಕ್ಕೆ ಪಲಾಯನ ಮಾಡಿದ್ದಾರೆ. ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರು ಹಸೀನಾ ಸರ್ಕಾರದ ಪತನದ ಮೂರು ದಿನಗಳ ನಂತರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಯೂನುಸ್ ಹಸೀನಾ ಅವರನ್ನು ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದರು ಮತ್ತು ಅವರ ಅವಾಮಿ ಲೀಗ್ ಪಕ್ಷದ ಚಟುವಟಿಕೆಗಳನ್ನು ನಿಷೇಧಿಸಿದ್ದರು. ಹಸೀನಾ ಮತ್ತು ಅವರ ಪಕ್ಷ ಇಬ್ಬರೂ ವಿಶೇಷ ನ್ಯಾಯಮಂಡಳಿಯನ್ನು ‘ಕಾಂಗರೂ ನ್ಯಾಯಾಲಯ’ ಎಂದು ಕರೆದಿದ್ದಾರೆ.
ತಮ್ಮ ಮಧ್ಯಂತರ ಸರ್ಕಾರ ಫೆಬ್ರವರಿಯಲ್ಲಿ ಮುಂದಿನ ಚುನಾವಣೆಗಳನ್ನು ನಡೆಸಲಿದೆ ಮತ್ತು ಹಸೀನಾ ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂದು ಯೂನುಸ್ ಹೇಳಿದ್ದರು.
ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿಯನ್ನು ಭೇಟಿಯಾಗುವ ಸುಳಿವು ನೀಡಿದ ಟ್ರಂಪ್


