ಪೊಲೀಸರ ನಿಷೇದಾಜ್ಞೆ, ನೂರಾರು ಜನರ ಬಂಧನದ ನಡುವೆಯೂ ಪೌರತ್ವ ತಿದ್ದುಪಡಿಯ ವಿರುದ್ಧದ ಪ್ರತಿಭಟನೆ ಮುಗಿಲು ಮುಟ್ಟಿದೆ. ಈಗ ಸಾವಿರಕ್ಕೂ ಹೆಚ್ಚು ಜನ ಟೌನ್ ಹಾಲ್ ಮುಂದೆ ಜಮಾಯಿಸಿದ್ದು ಪ್ರತಿಭಟನೆ ಭುಗಿಲೆದ್ದಿದೆ.
ಮುಖ್ಯವಾಗಿ ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾವಿರ ಜನ ಬೆಂಗಳೂರಿನ ಟೌನ್ ಹಾಲ್ ಮುಂದೆ ಜಮಾಯಿಸಿದ್ದು ಪ್ರತಿಭಟನಾಕಾರರ ಹರಿವು ಹೆಚ್ಚುತ್ತಲೇ ಇದೆ. ಎಲ್ಲೆಲ್ಲೂ ಭಾರತದ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧಧ ಘೋಷಣೆಗಳು ಮುಗಿಲು ಮುಟ್ಟಿವೆ.

ಪೊಲೀಸರ ಪ್ರತಭಟನಾಕಾರರನ್ನು ನಿಭಾಯಿಸಲು ಹರಸಾಹಸಪಡುತ್ತಿದ್ದು ಲಾಠಿ ಚಾರ್ಜ್ ಮಾಡುವ ಸಂಭವವೂ ಇದೆ.
ಇನ್ನೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿ ದಯವಿಟ್ಟು ಕಾಯ್ದೆಯನ್ನು ವಿರೋಧಿಸಬೇಡಿ, ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಸೆಕ್ಷನ್ 144 ಹಾಕಿದ್ದು ಏಕೆ? ಹಿಟ್ಲರ್‌ನ ಜರ್ಮನಿ ದೇಶವೇ ಇದು? ಇದು ಗಾಂಧಿಯವರ ಭಾರತ ಎಂಬುದು ನೆನಪಿರಲಿ. ಯಾವುದೇ ಕಾರಣಕ್ಕೂ ಶಾಂತಿಯುತ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಬಾರದು. ಪ್ರತಿಭಟನೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಯಡಿಯೂರಪ್ಪ ವಿಫಲವಾದರೆ ರಾಜೀನಾಮೆ ಕೊಡಲಿ ಎಂದಿದ್ದಾರೆ.

ದೇಶದ ಯುವಕರು ನಿರುದ್ಯೋಗದ ಬಗ್ಗೆ ಮಾತಾಡುತ್ತಾರೆ ಎಂದು ದಿಕ್ಕುತಪ್ಪಿಸಲು ಈ ಕಾಯ್ದೆಗಳನ್ನು ತರಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಕಾಯ್ದೆ ಮತ್ತು ಆಹಾರದ ಹಕ್ಕಿನ ಕಾಯ್ದೆ ತಂದಿದ್ದೆವು, ಈ ರೀತಿಯ ದೇಶ ಒಡೆಯುವ ಕಾಯ್ದೆಗಳನ್ನಲ್ಲ ಎಂದು ಕಿಡಿಕಾರಿದ್ದಾರೆ.
ಮೈಸೂರು, ಬಳ್ಳಾರಿ, ಹಾಸನ ಮತ್ತು ಕಲಬರುಗಿ ಸೇರಿದಂತೆ ರಾಜ್ಯದ್ಯಂತ ಪ್ರತಿಭಟನೆ ಜೋರಾಗುತ್ತಲೇ ಇದೆ.


