ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸ್ಪೋಟ ಸಂಭವಿಸಿ 13 ಜನರು ಸಾವನ್ನಪ್ಪಿದ ಬಳಿಕ, ದೇಶದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರು ಎಂದು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿದೆ. ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೂಡ ದೃಢೀಕರಿಸಿದ, ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿ ಜನರನ್ನು ಪ್ರಚೋದಿಸುವ ಮೂಲಕ ಈ ಪ್ರಯತ್ನಕ್ಕೆ ಏಣಿ ಇಟ್ಟು ಕೊಡುತ್ತಿವೆ.
ಈ ನಡುವೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಅಜಿತ ದೋವಲ್ ಅವರು “ಭಾರತದಲ್ಲಿ ಐಎಸ್‌ಐ (ಪಾಕಿಸ್ತಾನದ ಗುಪ್ತಚರ ಏಜೆನ್ಸಿ) ಕಾರ್ಯಗಳಿಗಾಗಿ ಮುಸ್ಲಿಮರಿಗಿಂತ ಹೆಚ್ಚಿನ ಹಿಂದೂಗಳನ್ನು ನೇಮಕ ಮಾಡಿಕೊಳ್ಳಲಾಗಿದೆ” ಎಂದು ಹೇಳಿರುವ 35 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಮುಸ್ಲಿಮರ ವಿರುದ್ದದ ಆರೋಪಗಳಿಗೆ ತಿರುಗೇಟು ನೀಡಲು ದೋವಲ್ ಅವರ ಈ ವಿಡಿಯೋ ಕ್ಲಿಪ್ ಬಳಿಸಿಕೊಂಡಿದ್ದಾರೆ.
“ಐಎಸ್‌ಐ ಏಜೆಂಟ್‌ಗಳಾಗಿ ಮುಸಲ್ಮಾನರಿಗಿಂತ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಯೋತ್ಪಾದನೆಯನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ನೋಡಬಾರದು. ಭಾರತದ ಮುಸ್ಲಿಂ ವಿದ್ವಾಂಸರು ಭಯೋತ್ಪಾದನೆಯ ವಿರುದ್ದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಫತ್ವಾ ಹೊರಡಿಸಿದ್ದಾರೆ. ಆದರೆ, ಯಾವುದೇ ಹಿಂದೂ ಸಂಘಟನೆಗಳು ಆ ರೀತಿಯ ಯಾವ ಹೇಳಿಕೆಗಳನ್ನೂ ನೀಡಿಲ್ಲ” ಎಂದು ಅಜಿತ್ ದೋವಲ್ ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ.
ವೈರಲ್ ವಿಡಿಯೋ ನಕಲಿ ಎಂದ ಅಜಿತ್ ದೋವಲ್
ಹಳೆಯ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಅಜಿತ್ ದೋವಲ್ ತನ್ನ ವರಸೆ ಬದಲಿಸಿದ್ದಾರೆ. ಅದು ‘ಡೀಪ್‌ಫೇಕ್’ (ಎಐ ಸೃಷ್ಟಿತ) ಎಂದು ಹೇಳಿದ್ದಾರೆ.
ನವೆಂಬರ್ 17 ರಂದು ಸಿಎನ್‌ಎನ್-ನ್ಯೂಸ್ 18 ಸುದ್ದಿವಾಹಿನಿಗೆ ನೀಡಿದ ಹೇಳಿಕೆಯಲ್ಲಿ, “ನಾನು ಎಂದಿಗೂ ಅಂತಹ ಮಾತುಗಳನ್ನು ಹೇಳಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ತಿರುಚಿ ಈ ವಿಡಿಯೋವನ್ನು ರಚಿಸಲಾಗಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ವಿರೂಪಗೊಳಿಸಲು ಇಂತಹ ಮಾಧ್ಯಮ ಸಾಧನಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ವೈರಲ್ ಆಗುತ್ತಿರುವ ವಿಡಿಯೋ ಭಾರತದ ಭಯೋತ್ಪಾದನಾ ನಿಲುವನ್ನು ಗುರಿಯಾಗಿಸುವ ಪ್ರಯತ್ನವಾಗಿದೆ” ಎಂದಿದ್ದಾರೆ.
ದೋವಲ್ ಹೇಳಿಕೆ ಅಲ್ಲಗಳೆದ ಆಲ್ಟ್ ನ್ಯೂಸ್
“ವೈರಲ್ ವಿಡಿಯೋ ಡೀಪ್‌ಫೇಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ನಾವು ಕೆಲವು ಕೀ ವರ್ಡ್‌ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ದೋವಲ್ ಅವರ ವೈರಲ್ ವಿಡಿಯೋ ಮಾರ್ಚ್ 20, 2014ರಂದು ಆಸ್ಟ್ರೇಲಿಯಾ ಇಂಡಿಯಾ ಇನ್‌ಸ್ಟಿಟ್ಯೂಟ್ ಅಪ್‌ಲೋಡ್ ಮಾಡಿರುವ 1 ಗಂಟೆ 17 ನಿಮಿಷಗಳ ಯೂಟ್ಯೂಬ್ ವಿಡಿಯೋದಿಂದ ತೆಗೆದುಕೊಳ್ಳಲಾಗಿದೆ ಎಂಬುದಾಗಿ ಕಂಡುಬಂದಿದೆ” ಎಂದು ಆಲ್ಟ್ ನ್ಯೂಸ್ ಹೇಳಿದೆ.
“ವಿಡಿಯೋದಲ್ಲಿ 1ನಿಮಿಷ 4 ಸೆಕೆಂಡ್ ಅವಧಿಯಲ್ಲಿ, ‘ನಾನು ಈಗ ಒಬ್ಬ ವ್ಯಕ್ತಿಯಾಗಿ ಬಯಲಾಗಿರುವ ಕಾರಣ ಒಂದು ಸಣ್ಣ ವಿಷಯವನ್ನು ಹೇಳುತ್ತೇನೆ… ಭಾರತದಲ್ಲಿ ಗುಪ್ತಚರ ಕಾರ್ಯಗಳಿಗಾಗಿ ಪಾಕಿಸ್ತಾನದ ಐಎಸ್‌ಐ ಸಂಸ್ಥೆ ಯಾರನ್ನೆಲ್ಲಾ ನೇಮಿಸಿಕೊಂಡಿದೆ ಎಂದರೆ, ಮುಸ್ಲಿಮರ ಸಂಖ್ಯೆಗಿಂತ ಹೆಚ್ಚು ಹಿಂದೂಗಳೇ ಇದ್ದಾರೆ. 1947ರಿಂದ ಇಲ್ಲಿಯವರೆಗೆ ಬೆಳಕಿಗೆ ಬಂದಿರುವ 4,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶೇಕಡಾ 20ರಷ್ಟು ಕೂಡ ಮುಸ್ಲಿಮರು ಇಲ್ಲ. ಆದ್ದರಿಂದ ಇದು ತುಂಬಾ ತಪ್ಪು ಕಲ್ಪನೆ. ನಾವು ಮುಸ್ಲಿಮರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಮತ್ತು ಈ ದೇಶವನ್ನು ಮಹಾನ್ ದೇಶವಾಗಿ ಮಾಡುತ್ತೇವೆ” ಎಂಬುವುದಾಗಿ ದೋವಲ್ ಹೇಳಿದ್ದಾರೆ ಎಂದು ಆಲ್ಟ್ ನ್ಯೂಸ್ ತಿಳಿಸಿದೆ.
ದೋವಲ್ ಅವರ ಹೇಳಿಕೆಯ ಪೂರ್ಣ ವಿಡಿಯೋ ಈ ಕೆಳಗಿನ ಲಿಂಕ್‌ನಲ್ಲಿದೆ…


