ದಲಿತ ಕುಟುಂಬದ ವಿವಾಹಕ್ಕೆ ಆಗಮಿಸಿದ ಅತಿಥಿಗಳ ಮೇಲೆ ಪ್ರಬಲ ಜಾತಿಗೆ ಸೇರಿದ ಗುಂಪು ಹಲ್ಲೆ ನಡೆಸಿದೆ. “ವಾಹನದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನೋಡಿದ ನಂತರ ದುಷ್ಕರ್ಮಿಗಳು ಕೋಪಗೊಂಡು ದಾಳಿ ನಡೆಸಿದ್ದಾರೆ” ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಬದೌನ್‌ನ ಫೈಜ್‌ಗಂಜ್ ಬೆಹತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದಲಿತ ಕುಟುಂಬದ ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳ ಮೇಲೆ ಹಲ್ಲೆ ನಡೆದಿರುವು ವಿಡಿಯೊ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಅಂಬೇಡ್ಕರ್ ಪ್ರತಿಮೆ ಇರುವ ವಾಹನವನ್ನು ನೋಡಿದ ನಂತರ ಕೆಲವು ದುಷ್ಕರ್ಮಿಗಳು ಮದುವೆ ಅತಿಥಿಗಳ ಮೇಲೆ ದಾಳಿ ಮಾಡಿದ್ದಾರೆ. ಹಲ್ಲೆ ಕುರಿತ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದು, ಘಟನೆಗೆ ಸಂಬಂಧಿಸಿದ ವೀಡಿಯೊ ಕೂಡ ಹೊರಬಿದ್ದಿದೆ.
ನವೆಂಬರ್ 12 ರ ರಾತ್ರಿ ಈ ಘಟನೆ ನಡೆದಿದೆ. ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳ ಮೇಲೆ ಹಲ್ಲೆ ಜೊತೆಗೆ ಪಿಸ್ತೂಲುಗಳನ್ನು ತೋರಿಸಿ ಬೆದರಿಸಲಾಗಿದೆ. ಘಟನೆ ನಡೆದ ಎರಡು ದಿನಗಳ ಕಾಲ ಪೊಲೀಸರು ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ್ದಾರೆ.
ಉಘೈತಿ ಪೊಲೀಸ್ ಠಾಣೆ ಪ್ರದೇಶದ ಮೇವಾಲಿ ಗ್ರಾಮದ ನಿವಾಸಿ ಧರಂಪಾಲ್ ಸಿಂಗ್, ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಸಂಬಂಧಿಕರ ಮದುವೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ. ದಾರಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಕಾರನ್ನು ಹಿಂದಿಕ್ಕಿ, ತಡೆದು, ಅನುಚಿತವಾಗಿ ವರ್ತಿಸಿದರು. ಕಾರಿನಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಇತ್ತು, ಅದನ್ನು ನೋಡಿದ ದಾಳಿಕೋರರು ಜಾತಿ ನಿಂದನೆ ಮಾಡಿದರು. ನಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಧರಂಪಾಲ್ ಸಿಂಗ್ ಆರೋಪಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದೇವೆ, ಆದರೆ ಅವರು ಅದನ್ನು ನಿರ್ಲಕ್ಷಿಸಿದರು. ಈ ಮಧ್ಯೆ, ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ದೂರು ಸ್ವೀಕರಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳುತ್ತಾರೆ.


