ಹಾವೇರಿ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಶೌಚಾಲಯಕ್ಕೆ ತೆರಳುವ ದಾರಿಯಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ಆಗಿದ್ದು, ಪರಿಣಾಮ ನವಜಾತ ಶಿಶು ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ (ನವೆಂಬರ್ 18) ನಡೆದಿದೆ.
ಘಟನೆಗೆ ವೈದ್ಯರು ಹಾಗೂ ನರ್ಸ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ರೂಪಾ ಗಿರೀಶ್ ಕರಬಣ್ಣನವರ (30) ಎಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆರಿಗೆ ಕೊಠಡಿಯಲ್ಲಿ ಹೆಚ್ಚು ಮಹಿಳೆಯರಿದ್ದರು. ಹೀಗಾಗಿ, ಬೆಡ್‌ಗಳ ಕೊರತೆ ಇತ್ತು, ಮಹಿಳೆಗೆ ಬೆಡ್ ಸಿಕ್ಕಿರಲಿಲ್ಲ ಎಂದು ವರದಿಯಾಗಿದೆ.
ಆಸ್ಪತ್ರೆಯ ಕೊಠಡಿಯ ಹೊರಗೆ ನೆಲದ ಮೇಲೆ ಕುಳಿತಿದ್ದ ರೂಪಾ ನೋವು ಅನುಭವಿಸುತ್ತಿದ್ದರು. ಆದರೂ, ಯಾರೂ ಬೆಡ್ ಕೊಡಿಸಲು ಮುಂದಾಗಿರಲಿಲ್ಲ. ಬಳಿಕ ಶೌಚಾಲಯದ ಕಡೆ ತೆರಳುವಾಗ ದಾರಿಯಲ್ಲೇ ಹೆರಿಗೆ ಆಗಿದೆ. ಈ ವೇಳೆ ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಆಕೆಯ ಕುಟುಂಬಸ್ಥರು ದೂರಿದ್ದಾರೆ.
‘ರೂಪಾಗೆ ತೀವ್ರ ಹೆರಿಗೆ ನೋವಿದ್ದರೂ ವೈದ್ಯರು ಹಾಗೂ ಶುಶ್ರೂಷಕಿಯರು ಸ್ಪಂದಿಸಿಲ್ಲ. ಆಕೆ ಕಿರುಚಾಡಿದರೂ ಬರಲಿಲ್ಲ. ಬಹುತೇಕ ನರ್ಸ್‌ಗಳು ಬಿಸ್ಕೆಟ್, ಕುರ್ಕುರೆ ತಿನ್ನುತಿದ್ದರು. ಮೊಬೈಲ್‌ನಲ್ಲಿ ಮಾತನಾಡುತ್ತಾ, ಅದರಲ್ಲೇ ತಲ್ಲೀನರಾಗಿದ್ದರು. ಇವರೆಲ್ಲರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ” ಎಂದು ಕುಟುಂಬಸ್ಥರು ಹೇಳಿದ್ದಾರೆ.


