ಆಂಧ್ರಪ್ರದೇಶದ ಮಾರೇಡುಮಿಲ್ಲಿಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಹಿರಿಯ ನಾಯಕ ಮದ್ವಿ ಹಿಡ್ಮಾ ಸೇರಿದಂತೆ ಆರು ಮಾವೋವಾದಿಗಳು ಸಾವನ್ನಪ್ಪಿದ ಒಂದು ದಿನದ ನಂತರ ಈ ಹೊಸ ಎನ್‌ಕೌಂಟರ್ ನಡೆದಿದೆ. ಹಿಡ್ಮಾ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಬೆಟಾಲಿಯನ್ 1 ರ ಮುಖ್ಯಸ್ಥರಾಗಿದ್ದರು ಎಂದು ತಿಳಿದುಬಂದಿದೆ.
“ಮಂಗಳವಾರದ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ, ಸ್ಥಳೀಯವಾಗಿ ಬಂದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ” ಎಂದು ಎಪಿ ಗುಪ್ತಚರ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಚಂದ್ರ ಲಡ್ಡಾ ಹೇಳಿದ್ದಾರೆ.
ಕೊಲ್ಲಲ್ಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಎಲ್ಲಾ ಶವಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮೃತರಲ್ಲಿ ಒಬ್ಬರನ್ನು ಶಂಕರ್ ಎಂದೂ ಕರೆಯಲ್ಪಡುವ ಮೇತುರಿ ಜೋಖಾ ರಾವ್ ಎಂದು ಗುರುತಿಸಲಾಗಿದೆ. ಶಂಕರ್ ಶ್ರೀಕಾಕುಲಂ ಮೂಲದವರು ಮತ್ತು ಆಂಧ್ರ ಒಡಿಶಾ ಗಡಿ ಪ್ರದೇಶದ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಲಡ್ಡಾ ಹೇಳಿದರು. ಪೊಲೀಸರು ಸಂಗ್ರಹಿಸಿದ ಆರಂಭಿಕ ವಿವರಗಳ ಆಧಾರದ ಮೇಲೆ, “ಅವರು ತಾಂತ್ರಿಕ ವಿಷಯಗಳು, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಸಂವಹನದಲ್ಲಿ ಪರಿಣತಿ ಹೊಂದಿದ್ದರು” ಎಂದು ಹೇಳಿದ್ದಾರೆ.
ಗುಂಡಿನ ಚಕಮಕಿಯ ಸಮಯದಲ್ಲಿ ತಪ್ಪಿಸಿಕೊಂಡ ಮಾವೋವಾದಿಗಳಿಗಾಗಿ ತಂಡಗಳು ಹುಡುಕುತ್ತಿರುವುದರಿಂದ ಮಾರೇಡುಮಿಲ್ಲಿ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಅಧಿಕಾರಿಗಳು ನಿರೀಕ್ಷಿಸುತ್ತಾರೆ.


