ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯ ಚಿತ್ರನಟ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ಕಳೆದ ನಿಧನರಾಗಿದ್ದು, ಇದೀಗ ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನ ಖಾಲಿ ಉಳಿಸಿದೆ. ಆ ಜಾಗಕ್ಕೆ ಹಿರಿಯ ನಟ, ರಂಗಕರ್ಮಿ ಜಹಾಂಗೀರ್ ಎಂಎಸ್ ಅವರ ಹೆಸರು ಕೇಳಿಬರುತ್ತಿದೆ.
ನೀನಾಸಂ ರಂಗಶಿಕ್ಷಣಕೇಂದ್ರದಲ್ಲಿ ನಟನಾ ಡಿಪ್ಲೊಮ ಪದವಿ ಪಡೆದಿರುವ ಅವರು, ಹಲವು ಕನ್ನಡ ಧಾರಾವಾಹಿ, ಚಲನಚಿತ್ರ ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನೀನಾಸಂ ತಿರುಗಾಟದಲ್ಲಿ ಅವರು ಚೋರಚರಣದಾಸ, ಸಂಸಾರದಲ್ಲಿಸನಿದಪ, ಜುಜಬಿ ದೇವರ ಜುಗಾರಿ ಆಟ, ಮಹಾತ್ಮ, ಚೂರಿಕಟ್ಟೆ, ಧರ್ಮ ದುರಂತ, ಜತೆಗಿರುವನು ಚಂದಿರ, ಸಹ್ಯಾದ್ರಿಕಾಂಡ, ಕೆಂಪುಕಣಗಿಲೆ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಮೈಸೂರು ರಂಗಾಯಣಕ್ಕಾಗಿ ದೊರೆ ಈಡೀಪಸ್, ರಂಗಶಂಕರದ ಸಂಕೇತ್ ಗಾಗಿ
ನೀನಾನಾದ್ರೆ ನಾ ನೀನೇನ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.
ಅಮೇರಿಕದ ‘ಬ್ರೆಡ್ ಆಂಡ್ ಪೋಪೆಟ್’ ಥಿಯಟರ್ ನಲ್ಲಿ ಕೆಲಸ ಮಾಡಿದ ಅನುಭವ ಇದ್ದು, ಕರ್ನಾಟಕದ ಹಲವಾರು ಜಿಲ್ಲೆಯಾದ್ಯಂತ ಹವ್ಯಾಸಿ ರಂಗಭೂಮಿ ತಂಡಗಳೂಂದಿಗೆ ನಟ ತಂತ್ರಜ್ಞನಾಗಿ ಕೆಲಸ ಮಾಡಿದ್ದಾರೆ.
ಕನ್ನಡ ದೂರದರ್ಶನದ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಪಾಪಾ ಪಾಂಡು, ಪಾಂಡುರಂಗ ವಿಠಲ, ಪಾತು ಸಾತು ಹಲವಾರು ಧಾರವಾಹಿಗಳಲ್ಲಿ ನಟನೆ ಮಾಡಿದ್ದಾರೆ.
ಕಾನ್ಸ್ ಪ್ರಶಸ್ತಿ ವಿಜೇತ, ಆಸ್ಕರ್ ನಾಮನಿದೇ೯ಶಿತವಾದ ಸೂರ್ಯ ಕಾಂತಿ ಹೊಗಳಿಗೆ ಮದಲೇಗೊತ್ತಿತ್ತು ಸೇರಿದಂತೆ ಪೋಟೋ, ಯಜಮಾನ, ಬಹದ್ದೂರ್, ವಾಘಚಿಪಾಣಿ, ಸದ್ದು ವಿಚಾರಣೆ ನೆಡೆಯುತ್ತಿದೆ, ಅಭಿಮನ್ಯೂ ಸೇರಿದಂತೆ ಇನ್ನೂ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಮೇರಿಕಾದ ಬೆಡ್ಅಂಡ್ ಪಪೆಟ್ ಥಿಯೇಟರ್, ಕರ್ನಾಟಕದ ನೀನಾಸಮ್, ಪುಣೆಯ ಎಫ್‌ಟಿಐಐ, ರಂಗಾಯಣ, ರಂಗಶಂಕರ ಸಂಕೇತ್ ಸೇರಿದಂತೆ ಹಲವಾರು ತಂಡಗಳ ಜೊತೆಗೆ ನಟನೆ, ನಿರ್ದೇಶನದ ಜೊತೆಗೆ ತಂತ್ರಜ್ಞರಾಗಿಯೂ ಕೆಲಸ ಮಾಡಿದ ಅನುಭವ ಇದೆ. ಕಳೆದ 15 ವರ್ಷ ದಿಂದ ಹುಬ್ಬಳಿಯಲ್ಲಿ ವಾಸ ಮಾಡುತ್ತಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ನಟ ಎಂ.ಎಸ್. ಜಹಾಂಗೀರ್, “ಜಾತ್ಯತೀತ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಅವಕಾಶ ವಂಚಿತ ಸಮುದಾಯಗಳಿಗೆ ಆದ್ಯತೆ ನೀಡುವ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ನಾವು ಇಂಥ ಸರ್ಕಾರಗಳಿಂದ ಮಾತ್ರವೇ ಸಾಮಾಜಿಕ ನ್ಯಾಯ ನಿರೀಕ್ಷೆ ಮಾಡಬಹುದು. ಈ ಹಿಂದೆ ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಅವರು, ಅಲ್ಪಸಂಖ್ಯಾತ ಸಮುದಾಯದಲ್ಲೇ ಸಣ್ಣ ಗುಂಪಾದ ಪಿಂಜಾರ ಸಮುದಾಯಕ್ಕೆ ಸೇರಿದ್ದವರಾಗಿದ್ದರು. ಈವರೆಗೆ ಆ ಸಮುದಾಯಗಳಿಗೆ ಸಿಕ್ಕ ಅವಕಾಶ ಬಹಳ ಕಡಿಮೆ. ಈ ರೀತಿಯ ಅತಿ ಸೂಕ್ಷ್ಮ ಸಮುದಾಯದ ವ್ಯಕ್ತಿಗೆ ಸರ್ಕಾರ ಅವಕಾಶ ನೀಡಿತ್ತು. ಆದರೆ, ದುರಾದೃಷ್ಟವಶಾತ್ ರಾಜು ತಾಳಿಕೋಟೆ ನಮ್ಮನ್ನು ಅಗಲಿದ್ದಾರೆ. ಅಪರೂಪಕ್ಕೆ ಈ ಸಮುದಾಯಕ್ಕೆ ಅವಕಾಶ ಸಿಕ್ಕಿದ್ದು, ಸರ್ಕಾರ ಪ್ರಾದೇಶಿಕ ಮತ್ತು ಪ್ರಾತಿನಿಧ್ಯ ಆಧಾರದಲ್ಲಿ ಇದೇ ಸಮುದಾಕ್ಕೆ ಮತ್ತೊಮ್ಮೆ ಅವಕಾಶ ನೀಡಿದರೆ ಉತ್ತಮವಾಗಿರುತ್ತದೆ” ಎಂದರು.
“ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಮಾತ್ರವಲ್ಲ, ಇದೇ ಸಮುದಾಯದ ಸಹನಾ ಪಿಂಜಾರ ಅವರು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. ಶಕೀಲ್ ಅಹಮದ್ ಎನ್ನುವವರು ಹಲವು ರಂಗ ತಂಡಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರನ್ನೇ ನಿರ್ದೇಶಕರನ್ನಾಗಿ ಮಾಡುತ್ತೇವೆ ಎಂದು ಬೇರೆ ಯಾರನ್ನೋ ಆಯ್ಕೆ ಮಾಡುವ ಬದಲಿಗೆ ಸೂಕ್ಷ್ಮ ಗುಂಪುಗಳಾದ ನದಾಫ್ ಮತ್ತು ಪಿಂಜಾರ ಸಮುದಾಯದ ಕಲಾವಿದರಿಗೆ ಅವಕಾಶ ನಿಡಬೇಕು. ಕಳೆದ ಮೂವತ್ತು ವರ್ಷಗಳಿಂದ ನಾನು ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಅವಕಾಶ ಸಿಕ್ಕರೆ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗಬಹುದು” ಎಂದು ಹೇಳಿದರು.


