ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಜಗ್ತಾಪ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 19) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಗ್ತಾಪ್ ಸುಮಾರು ಐದೂವರೆ ವರ್ಷಗಳಿಂದ ಬಂಧನದಲ್ಲಿದ್ದಾರೆ ಎಂಬುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ಜಾಮೀನು ನೀಡಿದೆ.
“ಅವರು (ಜಗ್ತಾಪ್) 5 ವರ್ಷ 6 ತಿಂಗಳು ಬಂಧನದಲ್ಲಿ ಕಳೆದಿದ್ದಾರೆ. ಕೋರಿಕೆಯಂತೆ ಪ್ರಕರಣವನ್ನು ಮುಂದೂಡಲಿ, ಆದರೆ ಜಾಮೀನು ಮಂಜೂರು ಮಾಡಲಿ” ಎಂದು ಜಗ್ತಾಪ್ ಪರ ಹಿರಿಯ ವಕೀಲೆ ಅಪರ್ಣಾ ಭಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮನವಿ ಪರಿಗಣಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಕಿರಿಯ ಆರೋಪಿಗಳಲ್ಲಿ ಒಬ್ಬರಾದ ಜಗ್ತಾಪ್ ಅವರನ್ನು ಸೆಪ್ಟೆಂಬರ್ 8, 2020ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಅಕ್ಟೋಬರ್ 9, 2020ರಂದು ಅವರ ವಿರುದ್ದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ಜಗ್ತಾಪ್ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಸಂಘಟನೆಯಾದ ಕಬೀರ್ ಕಲಾ ಮಂಚ್ (ಕೆಕೆಎಂ) ನ ಸದಸ್ಯರು ಎಂದು ಆರೋಪಿಸಲಾಗಿದೆ.
2002ರ ಗುಜರಾತ್ ಗಲಭೆಯ ನಂತರ, ಹಲವಾರು ಕಲಾವಿದರು, ಕವಿಗಳು, ಗಾಯಕರು ಮತ್ತು ಬುದ್ಧಿಜೀವಿಗಳು ಒಟ್ಟಾಗಿ ಸೇರಿಕೊಂಡು ರಚಿಸಿದ ಒಂದು ಸಾಂಸ್ಕೃತಿಕ ಗುಂಪಾಗಿದೆ ಕೆಕೆಎಂ. ಈ ಗುಂಪು ತಮ್ಮ ಸಂಗೀತ, ಕವಿತೆ, ನಾಟಕ ಮತ್ತು ಇತರ ಕಲಾರೂಪಗಳ ಮೂಲಕ ಸಾಮಾಜಿಕ ನ್ಯಾಯ, ಸಾಮರಸ್ಯ, ಜಾತ್ಯತೀತತೆ, ಮತ್ತು ಗಲಭೆಯ ಸಮಯದಲ್ಲಿ ನಡೆದ ಅತ್ಯಾಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು.
ಕೆಕೆಎಂ ಮುಖ್ಯವಾಗಿ ದಲಿತ-ಬಹುಜನ ಸಮುದಾಯದ ಕಲಾವಿದರಿಂದ ರೂಪಿತವಾದ ಗುಂಪಾಗಿದ್ದು, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಸಂತ ಕಬೀರ್ ಅವರ ಆಶಯಗಳಿಂದ ಪ್ರೇರಿತವಾಗಿತ್ತು. ಗುಂಪಿನ ಸದಸ್ಯರು ಬೀದಿ ನಾಟಕ, ಪ್ರತಿಭಟನಾ ಗೀತೆಗಳು ಮತ್ತು ಕವಿತೆಗಳ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದರು.
ಸರ್ಕಾರ ‘ನಕ್ಸಲ್ ಸಂಪರ್ಕ’ದ ಆರೋಪ ಮಾಡಿ ಈ ಗುಂಪಿನ ಹಲವರನ್ನು ಬಂಧಿಸಿತ್ತು. ನಂತರ ಗುಂಪನ್ನು ನಿಷೇಧ ಮಾಡಿತು.
ಫೆಬ್ರವರಿ 14, 2022 ರಂದು ವಿಶೇಷ ಎನ್‌ಐಎ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಜಗ್ತಾಪ್ ಅವರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಕ್ಟೋಬರ್ 2022ರಲ್ಲಿ ಬಾಂಬೆ ಹೈಕೋರ್ಟ್ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗಾಗಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.


