ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಗುರುವಾರ (ನವೆಂಬರ್ 20) ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಬೋಧಿಸಿದರು. 2005, 2010 ಮತ್ತು 2015ರಲ್ಲಿ ಕೂಡ ಇದೇ ಮೈದಾನದಲ್ಲಿ ನಿತೀಶ್ ಕುಮಾರ್ ಪ್ರಮಾನವಚನ ಸ್ವೀಕರಿಸಿದ್ದರು.
1974ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ಗೆ ಕರೆ ನೀಡಿದ್ದು ಇದೇ ಸ್ಥಳದಲ್ಲಾಗಿತ್ತು.
ನಿತೀಶ್ ಕುಮಾರ್ ಜೊತೆ ಹಿರಿಯ ಬಿಜೆಪಿ ನಾಯಕರಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೌಧರಿ ಮತ್ತು ಸಿನ್ಹಾ, ಈ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೂಡ ಉಪ ಮುಖ್ಯಮಂತ್ರಿಗಳಾಗಿದ್ದರು.
ವಿಧಾನಪರಿಷತ್ ಸದಸ್ಯರಾದ ನಿತೀಶ್ ಕುಮಾರ್ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕ ಹಾಗೂ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಚೌಧರಿ, ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷದ ಮುಖ್ಯಸ್ಥ ಸಂತೋಷ್ ಕುಮಾರ್ ಸುಮನ್ ಅವರು ಹೊಸ ಸಂಪುಟ ಸೇರಿದ್ದಾರೆ.
ಜಮುಯಿಯಿಂದ ಸತತ ಎರಡನೇ ಅವಧಿಗೆ ಆಯ್ಕೆಯಾದ ಪ್ರಶಸ್ತಿ ವಿಜೇತ ಶೂಟರ್ ಶ್ರೇಯಸಿ ಸಿಂಗ್ ಅವರು ಹೊಸ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುಝಫ್ಫರ್‌ಪುರದ ಮಾಜಿ ಸಂಸದ ಅಜಯ್ ನಿಶಾದ್ ಅವರ ಪತ್ನಿ ರಮಾ ನಿಶಾದ್ ಅವರಿಗೆ ನೂತನ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇವರು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಸೇರಿ ಔರೈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಜೆಡಿ(ಯು)ನಿಂದ ಒಂಬತ್ತನೇ ಬಾರಿಗೆ ಶಾಸಕರಾಗಿ ಆಯ್ಕೆಯಾರುವ ಬಿಜೇಂದ್ರ ಪ್ರಸಾದ್ ಯಾದವ್ ಅವರು ರಾಜ್ಯ ಸಚಿವ ಸಂಪುಟಕ್ಕೆ ಮರಳಿದ್ದಾರೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ(ಆರ್‌ವಿ) ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂ ಪಕ್ಷದಿಂದ ಯಾರಿಗೂ ಸದ್ಯಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಈ ಎರಡು ಪಕ್ಷಗಳು ಕ್ರಮವಾಗಿ 19 ಮತ್ತು 4 ಸ್ಥಾನಗಳನ್ನು ಹೊಂದಿವೆ.
ನಿರ್ಗಮಿತ ಸರ್ಕಾರದಲ್ಲಿ, ಬಿಜೆಪಿ 15 ಮಂತ್ರಿಗಳನ್ನು ಹೊಂದಿತ್ತು, ಸಿಎಂ ನಿತೀಶ್ ಕುಮಾರ್ ಸೇರಿದಂತೆ ಜೆಡಿಯುನ 12 ಮಂತ್ರಿಗಳಿದ್ದರು. ಹಿಂದೂಸ್ತಾನಿ ಅವಾಮ್ ಮೋರ್ಚಾದ (ಜಾತ್ಯತೀತ) ಒಬ್ಬರು ಮತ್ತು ಒಬ್ಬ ಸ್ವತಂತ್ರ ಶಾಸಕ ಸಚಿವರಾಗಿದ್ದರು.
ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಎನ್‌ಡಿಎ ನಾಯಕರು, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಎನ್. ಚಂದ್ರಬಾಬು ನಾಯ್ಡು ಮತ್ತು ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಗಾಂಧಿ ಮೈದಾನಕ್ಕೆ ಆಗಮಿಸುವ ಮೂಲಕ ನಿತೀಶ್ ಕುಮಾರ್ ಗಮನಸೆಳೆದರು ಎಂದು ವರದಿಗಳು ಹೇಳಿವೆ.
ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೊ ಮತ್ತು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಇತರ ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಸಮಾರಂಭದಲ್ಲಿ ಹಾಜರಿದ್ದರು.
ನಿತೀಶ್ ಕುಮಾರ್ ಬುಧವಾರ ನಿರ್ಗಮಿತ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸಲ್ಲಿಸಿದ್ದರು. ಈ ವೇಳೆ ನಿತೀಶ್ ಕುಮಾರ್ ಜೊತೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಇದ್ದರು.


