ಪೂಜೆಗೆಂದು ಮಗಳನ್ನು ದೇವಸ್ಥಾನಕ್ಕೆ ಕರೆದೊಯ್ದ ತಾಯಿ, ಅಲ್ಲಿ ಆಕೆಯ ಹತ್ಯೆಗೆ ಯತ್ನಿಸಿ, ನಂತರ ತಾನೂ ಆತ್ಮಹತ್ಯೆಗೆ ಮುಂದಾದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ (ನವೆಂಬರ್ 19) ಮುಂಜಾನೆ ನಡೆದಿದೆ.
ಆನೇಕಲ್ ನಿವಾಸಿ ರಮ್ಯಾ (25) ಪ್ರಾಣಾಪಾಯದಿಂದ ಪಾರಾದ ಯುವತಿ. ಈಕೆಯ ಮೇಲೆ ದಾಳಿ ನಡೆಸಿದ ತಾಯಿ ಸುಜಾತಾ (49) ಆತ್ಮಹತ್ಯೆ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ತಾಯಿ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸುಜಾತಾ ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸುಜಾತ ಮಗಳು ರಮ್ಯಾ ಅವರೊಂದಿಗೆ ನಗರದ ಅಗ್ರಹಾರ ಲೇಔಟ್‌ನಲ್ಲಿ ನೆಲೆಸಿದ್ದರು. ಐದು ವರ್ಷಗಳ ಹಿಂದೆ ರಮ್ಯಾ ಅವರಿಗೆ ಆನೇಕಲ್ ನಿವಾಸಿ ಸೋಮಶೇಖರ್ ಅವರ ಜೊತೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದು, ಇಬ್ಬರೂ ಸಾವಿಗೀಡಾಗಿದ್ದರು. ಅಲ್ಲದೆ, ಗಂಡನಿಂದಲೂ ದೂರ ಆಗಿದ್ದರು. ಇದರಿಂದ ರಮ್ಯಾ ಮಾನಸಿಕವಾಗಿ ನೊಂದಿದ್ದರು ಎಂದು ವರದಿಯಾಗಿದೆ.
ಮಾನಸಿಕವಾಗಿ ನೊಂದಿದ್ದ ಮಗಳನ್ನು ತಾಯಿ ಸುಜಾತಾ ಅಗ್ರಹಾರ ಲೇಔಟ್‌ನಲ್ಲಿರುವ ಹರಿಹರೇಶ್ವರ ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸುತ್ತಿದ್ದರು. ಬುಧವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ತಾಯಿ ಮಗಳು ಇಬ್ಬರೇ ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದರು. ದೇವಸ್ಥಾನದಲ್ಲಿ ಸುಜಾತಾ ತಾನು ತಂದಿದ್ದ ಮಾರಾಕಾಸ್ತ್ರದಿಂದ ಮಗಳು ರಮ್ಯಾ ಅವರ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾರೆ. ಮಗಳ ಕುತ್ತಿಗೆ ಭಾಗದಲ್ಲಿ ರಕ್ತ ಬರುತ್ತಿದ್ದಂತೆ ಹೆದರಿದ ಸುಜಾತಾ, ತಾನೂ ಕತ್ತು ಕೊಯ್ದುಕೊಂಡು ಸ್ಥಳದಿಂದ ಓಡಿದ್ದಾರೆ. ನಂತರ ದೇವಸ್ಥಾನದ ಪಕ್ಕದಲ್ಲೇ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾರೆ ಎಂದು ವರದಿಗಳು ವಿವರಿಸಿವೆ.
ಸ್ಥಳೀಯರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನರಬಲಿ ಶಂಕೆ ವ್ಯಕ್ತಪಡಿಸಿದ ವರದಿಗಳು
“ಮಗಳ ಜೀವನದ ಏರುಪೇರುಗಳಿಂದ ಖಿನ್ನತೆಗೆ ಒಳಗಾಗಿದ್ದ ಸುಜಾತಾ ದೇವಸ್ಥಾನದಲ್ಲಿ ನರಬಲಿ ನೀಡಲು ಯತ್ನಿಸಿರಬಹುದು ಎಂಬ ಶಂಕೆಯಿದೆ. ಆದರೂ, ಘಟನೆಯ ಕಾರಣ ಸ್ಪಷ್ಟವಾಗಿಲ್ಲ. ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಆನಂತರ ನಾವು ವಿವರವಾದ ಹೇಳಿಕೆಗಳನ್ನು ದಾಖಲಿಸಬೇಕಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಕನ್ನಡದ ಹಲವು ಮುಖ್ಯವಾಹಿನಿ ಮಾಧ್ಯಮ ವರದಿಗಳು ಕೂಡ ನರಬಲಿಯ ಶಂಕೆಯನ್ನು ವ್ಯಕ್ತಪಡಿಸಿವೆ.


