ಸುಮಾರು 10 ರಿಂದ 12 ಸಾವಿರ ವರ್ಷಗಳ ನಂತರ ಮೊದಲ ಬಾರಿಗೆ, 2025 ನವೆಂಬರ್ 23ರಂದು ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡಿದೆ.
ಪರಿಣಾಮ ಭೂಮಿಯಿಂದ 15 ಕಿಲೋಮೀಟರ್ ಎತ್ತರಕ್ಕೆ ಆಕಾಶದತ್ತ ಭಾರೀ ಪ್ರಮಾಣದ ಜ್ವಾಲಾಮುಖಿ ಬೂದಿ, ಸಲ್ಫರ್ ಡೈಆಕ್ಸೈಡ್ ಮತ್ತು ಸಣ್ಣ ಗಾಜಿನಂತಹ ಕಣಗಳು ಚಿಮ್ಮಿವೆ.
ಜ್ವಾಲಾಮುಖಿ ಬೂದಿಯ ಮೋಡ ಈಗ ಸಾವಿರಾರು ಕಿಲೋಮೀಟರ್ ದೂರ ಪ್ರಯಾಣಿಸಿ, ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರವನ್ನು ದಾಟಿ ಭಾರತದ ಆಕಾಶಕ್ಕೆ ಬಂದಿದೆ. ನವೆಂಬರ್ 24ರ ಸಂಜೆ 6:30ರ ನಂತರ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆಕಾಶದಲ್ಲಿ ತೆಳುವಾದ ಮಂಜಿನಂತಹ ಪದರ ರಚನೆಯಾಗಿದೆ. ಆಕಾಶ ಸ್ವಲ್ಪ ಕಪ್ಪಗೆ ಗೋಚರಿಸಿದೆ.
ದೆಹಲಿಯ ಗಾಳಿಯ ಗುಣಮಟ್ಟ (ಎಕ್ಯೂಐ) ಈಗಾಗಲೇ 363 ರಿಂದ 435ರಷ್ಟು ‘ತೀವ್ರ’ ಮಟ್ಟದಲ್ಲಿದೆ. ಜ್ವಾಲಾಮುಖಿ ಬೂದಿ ಬಹಳ ಎತ್ತರದಲ್ಲಿ (25 ರಿಂದ 45 ಸಾವಿರ ಅಡಿ) ಇರುವುದರಿಂದ ಭೂಮಿಯ ಮೇಲಿನ ಮಾಲಿನ್ಯ ಹೆಚ್ಚಳವಾಗುವ ಸಾಧ್ಯತೆ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಆದರೆ, ಸ್ವಲ್ಪ ಬೂದಿ ಕೆಳಗೆ ಬಂದರೆ ಕಣ್ಣು, ಗಂಟಲು, ಶ್ವಾಸಕೋಶಕ್ಕೆ ತೊಂದರೆ ಆಗಬಹುದು. ಆಸ್ತಮಾ, ಹೃದ್ರೋಗ ಇರುವವರು ಎಚ್ಚರ ವಹಿಸಬೇಕು ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಜ್ವಾಲಾಮುಖಿ ಬೂದಿ ವಿಮಾನದ ಇಂಜಿನ್‌ಗೆ ತುಂಬಾ ಅಪಾಯಕಾರಿ. ಹಾಗಾಗಿ, ದೆಹಲಿ, ಮುಂಬೈ, ಹೈದರಾಬಾದ್, ಕೊಚ್ಚಿ ಸೇರಿದಂತೆ ಭಾರತದ ಹಲವು ವಿಮಾನ ನಿಲ್ದಾಣಗಳಿಂದ ಕೆಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಇನ್ನೂ ಕೆಲವು ತಡವಾಗಿ ಹಾರಾಟ ನಡೆಸಿವೆ.
ಮಧ್ಯಪ್ರಾಚ್ಯ ಮತ್ತು ಯೂರೋಪ್‌ನಿಂದ ಭಾರತಕ್ಕೆ ಬರುವ ವಿಮಾನಗಳು ಬೇರೆ ದಾರಿಯಲ್ಲಿ ಬಂದಿವೆ. ಇಂದು (ನ.25) ಸಂಜೆ 7:30ರ ನಂತರ ಬೂದಿಯ ಮೋಡ ಭಾರತದಿಂದ ಹೊರಹೋಗುತ್ತದೆ ಎಂದು ಐಎಂಡಿ ಹೇಳಿದೆ.
ಜ್ವಾಲಾಮುಖಿಯ ಬೂದಿ ಮುಖ್ಯವಾಗಿ ದೆಹಲಿಯಲ್ಲಿ ಕಾಣಿಸಿಕೊಂಡಿದೆ. ದೆಹಲಿಯಲ್ಲಿ ಈಗಾಗಲೇ ವಿಪರೀತ ವಾಯುಮಾಲಿನ್ಯ ಇರುವುದರಿಂದ ಜನರು ಹೊರಗಡೆ ಹೋಗುವಾಗ N95 ಮಾಸ್ಕ್ ಧರಿಸುವಂತೆ ಆಡಳಿತ ಸಲಹೆ ನೀಡಿದೆ.
ಮಕ್ಕಳು, ಹಿರಿಯರು, ಶ್ವಾಸಕೋಶ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ವಿಮಾನ ಪ್ರಯಾಣ ಮಾಡುತ್ತಿದ್ದರೆ ಫ್ಲೈಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಎಕ್ಯೂಐ ಆಪ್‌ನಲ್ಲಿ (ಸಮೀರ್ ಆಪ್) ಗಾಳಿಯ ಸ್ಥಿತಿ ನೋಡುತ್ತಿರಿ ಎಂದು ನಿರ್ದೇಶಿಸಿದೆ.
ಜ್ವಾಲಾಮುಖಿಯ ಬೂದಿಯ ಮೋಡ ನಾಳೆ (ನ.26) ಭಾರತದ ಆಕಾಶದಿಂದ ಪೂರ್ತಿಯಾಗಿ ಹೊರಟು ಚೀನಾ ಕಡೆಗೆ ಸಾಗುತ್ತದೆ ಎಂದು ಐಎಂಡಿ ತಿಳಿಸಿದೆ. ನಾಳೆ ಸಂಜೆಯ ನಂತರ ದೆಹಲಿ-ಉತ್ತರ ಭಾರತದ ಆಕಾಶ ಸ್ವಲ್ಪ ಸ್ಪಷ್ಟವಾಗುವ ಸಾಧ್ಯತೆ ಇದೆ (ಆದರೂ ಸಾಮಾನ್ಯ ಮಾಲಿನ್ಯ ಇರುತ್ತದೆ).
ಜ್ವಾಲಾಮುಖಿ ಸ್ಪೋಟಿಸಿದ ಜಾಗ ಭಾರತದಿಂದ ಎಷ್ಟು ದೂರದಲ್ಲಿದೆ?
ಹಯ್ಲಿ ಗುಬ್ಬಿ ಜ್ವಾಲಾಮುಖಿ ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿದೆ. ಇದರ ಅಂದಾಜು ಸ್ಥಾನ : 14° 15′ ಉತ್ತರ ಅಕ್ಷಾಂಶ, 40° 40′ ಪೂರ್ವ ರೇಖಾಂಶ (ಎರ್ಟಾ ಅಲೆ ಜ್ವಾಲಾಮುಖಿಯ ಸಮೀಪದಲ್ಲಿ). ಭಾರತದ ದೆಹಲಿಗೆ (ಸುಮಾರು 28° 36′ ಉತ್ತರ, 77° 12′ ಪೂರ್ವ) ಈ ಜ್ವಾಲಾಮುಖಿಯಿಂದ ನೇರ ಗಾಳಿಪಥದ ದೂರ ಸುಮಾರು 3,800 ಕಿಲೋಮೀಟರ್ (2,360 ಮೈಲ್) ಎಂದು ವರದಿಗಳು ಹೇಳಿವೆ.


