ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೌಕರರ ಸಂಘ ಎಜೆಎಕೆಎಸ್ ಪ್ರಾಂತೀಯ ಅಧ್ಯಕ್ಷ ಹಾಗೂ ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದೆ.
“ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ಅವಳು ಅವನೊಂದಿಗೆ ಸಂಬಂಧ ಹೊಂದಲು ಅನುಮತಿಸುವವರೆಗೆ ಮೀಸಲಾತಿ ಮುಂದುವರಿಯುತ್ತದೆ” ಎಂದು ಭಾನುವಾರ (ನ.23) ಭೋಪಾಲ್‌ನ ಅಂಬೇಡ್ಕರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಈ ಹೇಳಿಕೆಯ ವಿಡಿಯೋ ಸೋಮವಾರ (ನ.24) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬ್ರಾಹ್ಮಣ ಸಂಘಟನೆಗಳು, ಐಎಎಸ್ ಅಧಿಕಾರಿಯ ಹೇಳಿಕೆ ‘ಅಸಭ್ಯ, ಜಾತಿವಾದಿ ಮತ್ತು ಬ್ರಾಹ್ಮಣ ಹೆಣ್ಣುಮಕ್ಕಳಿಗೆ ಅತ್ಯಂತ ಅವಮಾನಕರ” ಎಂದು ಟೀಕಿಸಿವೆ. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
“ಬ್ರಾಹ್ಮಣ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಅಸಭ್ಯ ಹೇಳಿಕೆ ನೀಡಿರುವ ಅಧಿಕಾರಿಯ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಎಫ್‌ಐಆರ್ ದಾಖಲಿಸದಿದ್ದರೆ, ಇಡೀ ಬ್ರಾಹ್ಮಣ ಸಮಾಜವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ” ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಹೇಳಿದ್ದಾರೆ.
ಐಎಎಸ್ ಅಧಿಕಾರಿಯ ಹೇಳಿಕೆ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸುತ್ತದೆ. ಈ ಕಾರಣಕ್ಕೆ ಅವರ ವಿರುದ್ಧ ಕಠಿಣ ಕ್ರಮ ಇನ್ನಷ್ಟು ಮುಖ್ಯವಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ಮಧ್ಯಪ್ರದೇಶ ಸಚಿವಾಲಯ ಸೇವಾ ಅಧಿಕಾರಿಗಳು-ನೌಕರರ ಸಂಘದ ನಾಯಕ, ಸುಧೀರ್ ನಾಯಕ್ ಐಎಎಸ್ ಅಧಿಕಾರಿಯ ಹೇಳಿಕೆಯನ್ನು ‘ಸಾಮಾನ್ಯ ವರ್ಗದ ಜನರಿಗೆ ಅತ್ಯಂತ ಆಕ್ಷೇಪಾರ್ಹ ಮತ್ತು ಅವಮಾನಕರ’ ಎಂದು ಕರೆದಿದ್ದು, ನಾಗರಿಕ ಸೇವಾ (ನಡತೆ) ನಿಯಮಗಳ ಅಡಿಯಲ್ಲಿ ವರ್ಮಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೂಲತಃ ವರ್ಮಾ ಅವರು ಮಧ್ಯಪ್ರದೇಶ ಸರ್ಕಾರದ ಒಬ್ಬ ಅಧಿಕಾರಿ. ಅವರಿಗೆ ವಿವಾದಗಳು ಹೊಸತಲ್ಲ. 2021-22ರಲ್ಲಿ ವರ್ಮಾ ವಿರುದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆ ಕೇಸ್‌ನಿಂದ ತಪ್ಪಿಸಿಕೊಳ್ಳಲು ವರ್ಮಾ ನಕಲಿ ನ್ಯಾಯಾಲಯದ ಆದೇಶಗಳನ್ನು ರಚಿಸಿದ್ದರು. ಅದಕ್ಕೆ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಸಹಿ ಹಾಕಿ ಕೇಸ್ ಗೆದ್ದಂತೆ ಬಿಂಬಿಸಿದ್ದರು. ಯಾವ ನ್ಯಾಯಾಧೀಶರ ಹೆಸರಿನಲ್ಲಿ ಸಹಿ ಹಾಕಲಾಗಿತ್ತೋ, ಆ ನ್ಯಾಯಾಧೀಶರೇ ಗಮನಿಸಿ, “ಇದು ನನ್ನ ಸಹಿ ಅಲ್ಲ, ನಾನು ಇಂಥ ಆದೇಶ ಕೊಟ್ಟಿಲ್ಲ” ಎಂದು ಪೊಲೀಸ್ ದೂರು ದಾಖಲಿಸಿದ್ದರು. ಅಂತಿಮವಾಗಿ ಪೊಲೀಸರು ವರ್ಮಾ ಅವರನ್ನು ಬಂಧಿಸಿದ್ದರು.
ಪ್ರಸ್ತುತ ಐಎಎಸ್ ಅಧಿಕಾರಿಯಾಗಿರುವ ವರ್ಮಾ, ರಾಜ್ಯ ಆಡಳಿತ ಕೇಡರ್‌ನಿಂದ ಭಾರತೀಯ ಆಡಳಿತ ಸೇವೆ (ಐಎಎಸ್) ಗೆ ಬಡ್ತಿ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದೂ ಹೇಳಲಾಗ್ತಿದೆ.


