ಸಿಂಗಾಪುರದಲ್ಲಿ ಸಂಭವಿಸಿದ ಗಾಯಕ ಝುಬೀರ್ ಗರ್ಗ್ ಸಾವು ‘ಆಕಸ್ಮಿಕವಲ್ಲ; ಅದು ಕೊಲೆ’ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ನವೆಂಬರ್ 25) ಹೇಳಿದ್ದಾರೆ.
ಇದು ಮೊದಲ ದಿನದಿಂದಲೂ ಕೊಲೆ ಪ್ರಕರಣವಾಗಿತ್ತು. ಆರೋಪಿಗಳಾದ ಶ್ಯಾಮಕಾನು ಮಹಾಂತ, ಸಿದ್ಧಾರ್ಥ್ ಶರ್ಮಾ, ಅಮೃತಪ್ರವ ಮಹಾಂತ ಮತ್ತು ಶೇಖರ್ ಜ್ಯೋತಿ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ.
ಅಸ್ಸಾಂ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, “ನಮ್ಮ ಭಾವನೆಗಳು ಝುಬೀನ್ ಜೊತೆ ಇವೆ. ಅದಕ್ಕಾಗಿಯೇ ನಾವು ಅವರ ಹತ್ಯೆಯನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಝುಬೀನ್ ಗರ್ಗ್ 2025ರ ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ಈಜುತ್ತಿದ್ದಾಗ ಸಾವನ್ನಪ್ಪಿದ್ದರು.
ಈ ಸಾವನ್ನು ‘ಕೊಲೆ’ ಎಂದು ಏಕೆ ಹೇಳಲಾಗುತ್ತಿದೆ ಎಂಬುದನ್ನು ವಿವರಿಸಿದ ಸಿಎಂ ಶರ್ಮಾ, “ಸಾವಿನ ನಂತರ ಏನೋ ತಪ್ಪಾಗಿದೆ ಎಂದು ನಮಗೆ ಅನಿಸಿತು, ಅದಕ್ಕಾಗಿಯೇ ನಾವು ಬಿಎನ್ಎಸ್ ಸೆಕ್ಷನ್ 61 (ಕ್ರಿಮಿನಲ್ ಪಿತೂರಿ), 105 (ಶಿಕ್ಷಾರ್ಹ ನರಹತ್ಯೆ) ಮತ್ತು 106 (ದುಡುಕಿನ ಮತ್ತು ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಡಿಸೆಂಬರ್ 10ರೊಳಗೆ ಚಾರ್ಜ್ ಶೀಟ್ ಸಲ್ಲಿಕೆ
ಆರಂಭಿಕ ಹಂತದಲ್ಲಿ ಅಸ್ಸಾಂ ಪೊಲೀಸರಿಗೆ ಇದು “ಸಾದಾ ಮತ್ತು ಸರಳ ಕೊಲೆ” ಎಂಬುವುದು ಖಚಿತವಾಗಿತ್ತು. ಅದಕ್ಕಾಗಿಯೇ ಎರಡು ದಿನಗಳಲ್ಲಿ, ಅಸ್ಸಾಂ ಸರ್ಕಾರವು ಇದು ಕೊಲೆ ಎಂದು ನ್ಯಾಯಾಲಯಕ್ಕೆ ತಿಳಿಸಿತು ಮತ್ತು ಆರೋಪಗಳಿಗೆ ಸೆಕ್ಷನ್ 103 (ಕೊಲೆಗೆ ಶಿಕ್ಷೆ) ಸೇರಿಸಲು ಕೋರಿತು. ಎಲ್ಲಾ ಜಾಮೀನು ಅರ್ಜಿಗಳು ಮತ್ತು ಇತರ ಪ್ರಕ್ರಿಯೆಗಳು ಸೆಕ್ಷನ್ 103 ಅನ್ನು ಆಧರಿಸಿವೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಹಿಮಂತ ಬಿಸ್ವಾ ಶರ್ಮಾ ಅವರು, “ನಿಮಗೆ ತಿಳಿದಿರುವಂತೆ ವಿದೇಶದಲ್ಲಿ ಯಾವುದೇ ಘಟನೆ ನಡೆದರೆ ಬಿಎನ್‌ಎಸ್‌ಎಸ್‌ನ ಸೆಕ್ಷನ್ 208 ರ ಅಡಿಯಲ್ಲಿ, ಪ್ರಾಸಿಕ್ಯೂಟಿಂಗ್ ಏಜೆನ್ಸಿಯು ಗೃಹ ಸಚಿವಾಲಯ ಅಥವಾ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆ ಅನುಮತಿಯಿಲ್ಲದೆ, ನ್ಯಾಯಾಲಯವು ಈ ವಿಷಯವನ್ನು ಪರಿಗಣಿಸುವುದಿಲ್ಲ ಮತ್ತು ವಿಚಾರಣೆಗೆ ಮುಂದುವರಿಯುವುದಿಲ್ಲ. ಇಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯವನ್ನು ಮುಂದುವರಿಸಲು ಅನುಮತಿ ನೀಡಿದ್ದಾರೆ ಮತ್ತು ಈ ಅನುಮತಿಯು ನಮಗೆ ಸಕಾಲದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ನಾವು 10 ರಿಂದ 15 ದಿನಗಳ ಅವಧಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುತ್ತೇವೆ ಮತ್ತು ಡಿಸೆಂಬರ್ 10 ರ ಮೊದಲು ನಮ್ಮ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ” ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ.


