ಇಸ್ಕಾನ್ ಸಂಸ್ಥೆ ನಡೆಸುವ ಶಾಲೆಗಳಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್ 24) ವಿಲೇವಾರಿ ಮಾಡಿದೆ.
ಅರ್ಜಿದಾರರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್), ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮಕ್ಕಳ ಹಕ್ಕುಗಳ ಆಯೋಗಗಳ ಮೊರೆ ಹೋಗುವಂತೆ ಸೂಚಿಸಿದೆ.
ಆಂತರಿಕ ದಾಖಲೆಗಳು ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸೂಚಿಸುತ್ತವೆ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠ ವಿಚಾರಣೆ ನಡೆಸಿದೆ.
“ನಾವೀಗ ನ್ಯಾಯಾಲಯಕ್ಕೆ ತೋರಿಸಿರುವ ದಾಖಲೆಗಳು ಪ್ರಕರಣದ ಒಂದು ಸಣ್ಣ ಭಾಗ ಮಾತ್ರ. ನಿಜವಾಗಿ ಇದಕ್ಕಿಂತ ತುಂಬಾ ದೊಡ್ಡ ಮಟ್ಟದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅನ್ಯಾಯ ನಡೆಯುತ್ತಿದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆಗಳಿಗೆ ಈ ಹಿಂದೆಯೇ ದೂರು ಕೊಟ್ಟಿದ್ದೇವೆ. ಆದರೆ, ಅವರು ಯಾವ ಉತ್ತರವೂ ಕೊಟ್ಟಿಲ್ಲ, ಯಾವ ಕ್ರಮವೂ ಕೈಗೊಂಡಿಲ್ಲ” ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಾದ ಆಲಿಸಿದ ನ್ಯಾಯಮೂರ್ತಿ ನಾಗರತ್ನ ಅವರು, ಅರ್ಜಿದಾರರಿಗೆ ಎನ್‌ಸಿಪಿಆರ್ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಗಳಿಗೆ ಮತ್ತೊಂದು ಜ್ಞಾಪನೆಯನ್ನು (ರಿಮೈಂಡರ್) ಕಳುಹಿಸಲು ಸೂಚಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಯಾವುದೇ ಎಫ್‌ಐಆರ್ ದಾಖಲಿಸಿ, ತನಿಖೆ ಪ್ರಾರಂಭಿಸಲಾಗಿದೆಯೇ ಎಂದು ವಕೀಲರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲರು, “ನಮಗೆ ಪೂರ್ತಿ ಮಾಹಿತಿ ಗೊತ್ತಿಲ್ಲ, ಆದರೆ ನಾವು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
ಶ್ರೀಲ ಪ್ರಭುಪಾದ ಫೌಂಡೇಶನ್‌ನ ನ್ಯಾಯಮೂರ್ತಿ ರಜನೀಶ್ ಕಪೂರ್ ಮತ್ತು ರಾಧೇ ಕೃಷ್ಣ ಕಾನೂನು ನೆರವು ಪ್ರತಿಷ್ಠಾನ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇಸ್ಕಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಅರ್ಜಿಯನ್ನು ಇಸ್ಕಾನ್‌ನ ಬೆಂಗಳೂರು ಬಣ ಮತ್ತು ಸಂಸ್ಥೆಯ ಇತರ ಘಟಕಗಳ ನಡುವೆ ನಡೆಯುತ್ತಿರುವ ವಿವಾದದ ಕಾರಣಕ್ಕೆ ಸಲ್ಲಿಸಲಾಗಿದೆ. ಪರಿಶೀಲನಾ ಪೀಠದಲ್ಲಿನ ವಿಭಜನೆಯ ನಂತರ ಈ ವಿವಾದವು ಮೂವರು ನ್ಯಾಯಾಧೀಶರ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ಹೇಳಿದ್ದಾರೆ.
ಪ್ರಕರಣವು ಬಣ ಸಂಘರ್ಷಕ್ಕೆ ಸಂಬಂಧಿಸಿದೆ ಎಂಬುದನ್ನು ಅರ್ಜಿದಾರರು ನಿರಾಕರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ನ್ಯಾಯಮೂರ್ತಿ ನಾಗರತ್ನ ಅವರು, “ಈ ಪ್ರಕರಣವು ಮಕ್ಕಳಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ನಾವು ನಿಮ್ಮನ್ನು ತಟಸ್ಥ ಸಂಸ್ಥೆಗೆ ಹೋಗಲು ಸೂಚಿಸಿದ್ದೇವೆ” ಎಂದು ಹೇಳಿದ್ದಾರೆ.
Courtesy : livelaw.in


