ಮಂಗಳವಾರ ಉಕ್ರೇನ್ ಮೇಲೆ ರಷ್ಯಾ ಸರಣಿ ದಾಳಿಗಳನ್ನು ನಡೆಸಿದ್ದು, ನಗರದ ಕಟ್ಟಡಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಆದರೆ, ದಕ್ಷಿಣ ರಷ್ಯಾದಲ್ಲಿ ಉಕ್ರೇನ್ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್‌ನ ಕೆಲವು ಭಾಗಗಳಲ್ಲಿ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟೆಲಿಗ್ರಾಮ್‌ಗೆ ಪೋಸ್ಟ್ ಮಾಡಲಾದ ವೀಡಿಯೊ ದೃಶ್ಯಾವಳಿಗಳು ಕೈವ್‌ನ ಪೂರ್ವ ಜಿಲ್ಲೆಯ ಡ್ನಿಪ್ರೊವಿನ್ಸ್‌ಕಿಯಲ್ಲಿರುವ ಒಂಬತ್ತು ಅಂತಸ್ತಿನ ವಸತಿ ಕಟ್ಟಡದಲ್ಲಿ ದೊಡ್ಡದಾಗಿ ಬೆಂಕಿ ಹರಡುತ್ತಿರುವುದು ಸೆರೆಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಜಿನೀವಾದಲ್ಲಿ ಯುಎಸ್ ಮತ್ತು ಉಕ್ರೇನಿಯನ್ ಪ್ರತಿನಿಧಿಗಳ ನಡುವೆ ಯುಎಸ್-ರಷ್ಯಾ ಮಧ್ಯಸ್ಥಿಕೆಯ ಶಾಂತಿ ಯೋಜನೆಯ ಕುರಿತು ಭಾನುವಾರ ನಡೆದ ಮಾತುಕತೆಯ ನಂತರ ಈ ದಾಳಿಗಳು ನಡೆದಿವೆ.
ಡ್ನಿಪ್ರೊವಿನ್ಸ್‌ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐದು ಜನರು ಗಾಯಗೊಂಡಿದ್ದಾರೆ. ಮಧ್ಯ ಪೆಚೆರ್ಸ್ಕ್ ಜಿಲ್ಲೆಯ ಮತ್ತೊಂದು ವಸತಿ ಕಟ್ಟಡವು ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಮೇಯರ್ ವಿಟಾಲಿ ಕಿಟ್ಸ್ಕೊ ಹೇಳಿದ್ದಾರೆ.
ನಂತರ ನಡೆದ ಸರಣಿ ದಾಳಿಗಳಲ್ಲಿ, ಕೈವ್‌ನ ಪಶ್ಚಿಮ ಸ್ವ್ಯಾಟೋಶಿನಿ ಜಿಲ್ಲೆಯ ವಸತಿ ರಹಿತ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದರು. ಮೂವರು ಗಾಯಗೊಂಡಿದ್ದಾರೆ ಎಂದು ಕೈವ್ ನಗರ ಆಡಳಿತದ ಮುಖ್ಯಸ್ಥ ಟೈಮರ್ ಟ್ಕಾಚೆಂಕೊ ತಿಳಿಸಿದ್ದಾರೆ.
ಉಕ್ರೇನ್‌ನ ಇಂಧನ ಸಚಿವಾಲಯವು ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ಹೇಳಿದ್ದರೂ, ಹಾನಿಯ ವ್ಯಾಪ್ತಿಯನ್ನು ವಿವರಿಸಲಿಲ್ಲ. ಒಡೆಸಾ ಪ್ರದೇಶದಲ್ಲಿ ಇಂಧನ ಮತ್ತು ಬಂದರು ಮೂಲಸೌಕರ್ಯದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆಗಳು ತಿಳಿಸಿವೆ.
ರಷ್ಯಾದ ದಕ್ಷಿಣ ರೋಸ್ಟೊವ್ ಪ್ರದೇಶದ ಮೇಲೆ ರಾತ್ರಿಯಿಡೀ ಉಕ್ರೇನಿಯನ್ ಡ್ರೋನ್ ದಾಳಿಯಲ್ಲಿ ಮೂವರು ಜನರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದು, ಉಕ್ರೇನ್‌ನ ಗಡಿಯಿಂದ ದೂರದಲ್ಲಿರುವ ಟ್ಯಾಗನ್ರೋಗ್ ನಗರದಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಗವರ್ನರ್ ಯೂರಿ ಸ್ಲ್ಯುಸರ್ ಮಂಗಳವಾರ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದಾಳಿಯು ಖಾಸಗಿ ಮನೆಗಳು ಮತ್ತು ಬಹುಮಹಡಿ ವಸತಿ ಬ್ಲಾಕ್‌ಗಳು, ಸಾರ್ವಜನಿಕ ಸ್ಥಳಗಳು, ಗೋದಾಮು ಮತ್ತು ಅಂಗಡಿಯನ್ನು ಹಾನಿಗೊಳಿಸಿದೆ ಎಂದು ಸ್ಲ್ಯುಸರ್ ಹೇಳಿದರು.
ರಷ್ಯಾದ ವಾಯು ರಕ್ಷಣಾ ಪಡೆಗಳು ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಮತ್ತು ಆಕ್ರಮಿತ ಕ್ರೈಮಿಯಾದ ಮೇಲೆ ರಾತ್ರೋರಾತ್ರಿ 249 ಉಕ್ರೇನಿಯನ್ ಡ್ರೋನ್‌ಗಳನ್ನು ನಾಶಪಡಿಸಿದವು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.


