ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ ಮಂಗಳವಾರ ನಡೆದ ದಾರುಣ ಘಟನೆ ಒಂದು ಗ್ರಾಮವನ್ನು ಬೆಚ್ಚಿಬೀಳಿಸಿದೆ. ಹೆಣ್ಣು ಮಗು ಹುಟ್ಟಿದ ಕೋಪಕ್ಕೆ ತಾಯಿಯೇ ತನ್ನ ಮೂರು ದಿನದ ಹಸುಗೂಸನ್ನು ಕತ್ತು ಹಿಸುಕಿ ಕೊಂದಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಅಶ್ವಿನಿ ಹಳಕಟ್ಟಿ (28) ಎಂಬ ತಾಯಿ ಈಗಾಗಲೇ ಮೂರು ಹೆಣ್ಣು ಮಕ್ಕಳನ್ನು ಹೆತ್ತಿದ್ದಳು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿಗೆ ನವೆಂಬರ್ 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗು ಹುಟ್ಟಿತ್ತು. ಬಳಿಕ ಮಗುವಿನೊಂದಿಗೆ ತಾಯಿ ಮನೆ ಹಿರೇಮಲಂಗಿಗೆ ಬಂದಿದ್ದಳು.
ಮಂಗಳವಾರ ಬೆಳಗ್ಗೆ ಮನೆಯವರು ಹೊರಗಿದ್ದ ಸಮಯಕ್ಕೆ, ಅಶ್ವಿನಿ ತನ್ನ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆಮಾಡಿ ನಂತರ “ಮಗು ಉಸಿರಾಡುತ್ತಿಲ್ಲ” ಎಂದು ನಾಟಕವಾಡುತ್ತಾ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ವೈದ್ಯರು ಪರೀಕ್ಷಿಸಿದಾಗ ಕತ್ತು ಒತ್ತಿದ ಪರಿಣಾಮ ಉಸಿರುಗಟ್ಟಿ ಸಾವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಸುರೇಬಾನ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ರಾಮದುರ್ಗ ಡಿವೈಎಸ್.ಪಿ ಚಿದಂಬರ ಮಡಿವಾಳರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಈ ಘಟನೆಯು ದೊಡ್ಡ ಆಘಾತ ಮೂಡಿಸಿದೆ.


