ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸೇರಿದಂತೆ ಐವರನ್ನು ಖುಲಾಸೆಗೊಳಿಸಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯ ಬುಧವಾರ (ನವೆಂಬರ್ 26) ತೀರ್ಪು ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಶಿವಮೂರ್ತಿ ಮುರುಘಾ ಶರಣ ವಿರುದ್ದ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿತ್ತು. ಒಂದು ಪ್ರಕರಣದಲ್ಲಿ ಈಗ ಖುಲಾಸೆಗೊಂಡಿದ್ದಾರೆ. ಇನ್ನೊಂದು ಪ್ರಕರಣ ವಿಚಾರಣೆಗೆ ಬಾಕಿ ಇದ್ದು, ಅದಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಈ ಮಧ್ಯೆ, ಮುರುಘಾ ಶರಣ ಜಾಮೀನಿನ ಮೇಲೆ ಹೊರಗಿದ್ದಾರೆ. ಚಿತ್ರದುರ್ಗ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಅವರಿಗೆ ಷರತ್ತು ವಿಧಿಸಿದೆ ಎಂದು ವರದಿ ಹೇಳಿದೆ.
ಮುರುಘಾ ಮಠದ ಹಾಸ್ಟೆಲ್‌ನಲ್ಲಿ ನೆಲೆಸಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಮುರುಘಾ ಶರಣ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಈ ಸಂಬಂಧ 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅದೇ ವರ್ಷ ಆಗಸ್ಟ್ 27ರಂದು ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಚಿತ್ರದುರ್ಗದ ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ನವೆಂಬರ್ 18ರಂದು ತೀರ್ಪು ಕಾಯ್ದಿರಿಸಿದ್ದರು. ಅದನ್ನು ಇಂದು ಪ್ರಕಟಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣ, ಎರಡನೇ ಆರೋಪಿ ವಾರ್ಡನ್ ರಶ್ಮಿ, ಮೂರನೇ ಆರೋಪಿ ಬಸವಾದಿತ್ಯ ನಾಲ್ಕನೇ ಆರೋಪಿ ಮ್ಯಾನೇಜರ್ ಪರಮಶಿವಯ್ಯ ಮತ್ತು ಐದನೇ ಆರೋಪಿ ವಕೀಲ ಗಂಗಾಧರಯ್ಯ ಅವರನ್ನು ನ್ಯಾಯಾಲಯ ನಿರ್ದೋಷಿಗಳು ಎಂದು ತೀರ್ಪು ನೀಡಿರುವುದಾಗಿ ತಿಳಿದು ಬಂದಿದೆ.


