ಫೆಬ್ರವರಿ 2021ರಲ್ಲಿ ಕೋಲ್ಕತ್ತಾದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆಗೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಕಲ್ಕತ್ತಾ ಹೈಕೋರ್ಟ್ ಹೊಣೆಗಾರರನ್ನಾಗಿ ಮಾಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಚೈತಾಲಿ ಚಟರ್ಜಿ ದಾಸ್ ಅವರ ವಿಭಾಗೀಯ ಪೀಠವು, ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಪ್ರಕಾರ, ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಈಗಾಗಲೇ 10 ಲಕ್ಷ ರೂಪಾಯಿ ಕೊಟ್ಟಿರುವುದರಿಂದ ಬಾಕಿ 20 ಲಕ್ಷ ರೂಪಾಯಿ ಕೊಡುವಂತೆ ಸೂಚಿಸಿದೆ. ಮೂರು ತಿಂಗಳ ಒಳಗೆ ಹಣ ಪಾವತಿಸುವಂತೆ ನಿರ್ದೇಶಿಸಿದೆ.
ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಎರಡು ತಿಂಗಳ ಒಳಗೆ ನೀಡಬೇಕು ಎಂದು ಶುಕ್ರವಾರ (ನವೆಂಬರ್ 21) ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
“ಮಲ ಹೊರುವ ಪದ್ದತಿ ಗಂಭೀರ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಅದು ಇನ್ನೂ ಮುಂದುವರಿದಿರುವುದು ದೇಶದ ಆತ್ಮ ಸಾಕ್ಷಿಗೆ ಕಪ್ಪುಚುಕ್ಕೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2013ರ ಮಲ ಹೊರುವ ಪದ್ದತಿ ನಿಷೇಧ ಕಾಯ್ದೆಯಡಿ ಕಡ್ಡಾಯ ಮೇಲ್ವಿಚಾರಣಾ ಕಾರ್ಯವಿಧಾನಗಳು ಅಸ್ತಿತ್ವದಲ್ಲಿಲ್ಲ ಎಂಬುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಲೈವ್ ಲಾ ವರದಿ ಹೇಳಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧದ ಎಫ್‌ಐಆರ್ ಮಾತ್ರ ಉಲ್ಲೇಖಿಸುವ ಪೊಲೀಸರ ಅಫಿಡವಿಟ್ ಅಸಮರ್ಪಕವಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ.
ಈ ಕುರಿತು ವರದಿ ಸಲ್ಲಿಸುವಂತೆ ಉಪ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಮತ್ತು ಒಂದು ತಿಂಗಳೊಳಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಪರಿಹಾರ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಲೈವ್ ಲಾ ವರದಿ ವಿವರಿಸಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರಾದ ನಾಲ್ವರು ಕಾರ್ಮಿಕರು ಕೋಲ್ಕತ್ತಾ ಮಹಾನಗರ ಪಾಲಿಕೆಯ ಪರಿಸರ ಮೂಲಸೌಕರ್ಯ ಸುಧಾರಣಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರನ್ನುಒಳಚರಂಡಿ ಸ್ವಚ್ವಗೊಳಿಸಲು ಮ್ಯಾನ್‌ಹೋಲ್‌ಗೆ ಇಳಿಸಲಾಗಿತ್ತು. ಅಲ್ಲಿ ವಿಷಕಾರಿ ಅನಿಲ ಉಸಿರಾಡಿ ಸಾವನ್ನಪ್ಪಿದ್ದರು.
19 ವರ್ಷದ ಶಬೀರ್ ಹುಸೈನ್, 35 ವರ್ಷದ ಮೊಹಮ್ಮದ್ ಅಲಂಗೀರ್, 22 ವರ್ಷದ ಜಹಾಂಗೀರ್ ಅಲಮ್ ಮತ್ತು 20 ವರ್ಷದ ಲಿಯಾಕತ್ ಅಲಿ ಮೃತ ದುರ್ದೈವಿಗಳು.
2013ರ ಮಲ ಹೊರುವ ಪದ್ದತಿ ನಿಷೇಧ ಕಾಯ್ದೆಯಡಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಮನುಷ್ಯರಿಂದ ಅಂದರೆ ಆಧುನಿಕ ಯಂತ್ರಗಳನ್ನು ಬಳಸದೆ ಸ್ವಚ್ಚ ಮಾಡಿಸುವುದನ್ನು ನಿಷೇಧಿಸಲಾಗಿದೆ.


