ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ.
ಸರ್ಕಾರದ ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿ ಮತ್ತು ‘ಪೂನಾ ಮಾರ್ಗಂ’ (ಬಸ್ತರ್ ಶ್ರೇಣಿ ಪೊಲೀಸರ ಸಾಮಾಜಿಕ ಪುನರ್ವಸತಿ ಅಭಿಯಾನ) ನಿಂದ ಪ್ರಭಾವಿತರಾಗಿ 12 ಮಹಿಳೆಯರು ಸೇರಿದಂತೆ 41 ಮಂದಿ ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಶರಣಾದವರಲ್ಲಿ ನಾಲ್ವರು ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಬೆಟಾಲಿಯನ್ ನಂ.1 ಮತ್ತು ಮಾವೋವಾದಿಗಳ ವಿವಿಧ ಕಂಪನಿಗಳ ಸದಸ್ಯರು, ಮೂವರು ಪ್ರದೇಶ ಸಮಿತಿಗಳ ಸದಸ್ಯರು, 11 ಪ್ಲಟೂನ್ ಮತ್ತು ಪ್ರದೇಶ ಸಮಿತಿ ಪಕ್ಷದ ಸದಸ್ಯರು, ಇಬ್ಬರು ಪಿಎಲ್‌ಜಿಎ ಸದಸ್ಯರು, ನಾಲ್ವರು ಮಿಲಿಟಿಯಾ ಪ್ಲಟೂನ್ ಕಮಾಂಡರ್‌ಗಳು, ಒಬ್ಬ ಉಪ ಕಮಾಂಡರ್, ಆರು ಮಂದಿ ಮಿಲಿಟಿಯಾ ಪ್ಲಟೂನ್ ಸದಸ್ಯರು, ಮತ್ತು ಉಳಿದವರು ನಿಷೇಧಿತ ಸಿಪಿಐ (ಮಾವೋವಾದಿ) ನ ಮುಂಚೂಣಿ ಸಂಘಟನೆಗಳಿಗೆ ಸೇರಿದವರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದ್ದಾರೆ.
ಒಟ್ಟು 41 ಮಂದಿಯಲ್ಲಿ 39 ಜನರು ಮಾವೋವಾದಿಗಳ ದಕ್ಷಿಣ ಉಪ-ವಲಯ ಬ್ಯೂರೋಗೆ ಸೇರಿದವರು ಎಂದು ಹೇಳಿದ್ದಾರೆ.
ಶರಣಾದವರೆಲ್ಲರೂ ದಂಡಕಾರಣ್ಯ ವಿಶೇಷ ವಲಯ ಸಮಿತಿ, ತೆಲಂಗಾಣ ರಾಜ್ಯ ಸಮಿತಿ ಮತ್ತು ನಿಷೇಧಿತ ಸಂಘಟನೆಯ ಧಮ್ತಾರಿ-ಗರಿಯಾಬಂದ್-ನುವಾಪಾ ವಿಭಾಗಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಶರಣಾದವರು ಸಂವಿಧಾನದಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಘನತೆಯ ಮತ್ತು ಸುರಕ್ಷಿತ ಜೀವನವನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪುನರ್ವಸತಿ ನೀತಿಯಡಿಯಲ್ಲಿ, ಪ್ರತಿ ಕೇಡರ್‌ಗೆ ಪ್ರೋತ್ಸಾಹ ಧನವಾಗಿ 50 ಸಾವಿರ ರೂಗಳ ತಕ್ಷಣದ ಆರ್ಥಿಕ ಸಹಾಯವನ್ನು ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
ಶರಣಾದವರಲ್ಲಿ ಪಾಂಡ್ರು ಹಪಕ ಅಲಿಯಾಸ್ ಮೋಹನ್ (37), ಬಂಡಿ ಹಪ್ಕಾ (35), ಲಕ್ಕು ಕೊರ್ಸ (37), ಬದ್ರು ಪುಣೆಂ (35), ಸುಖರಾಮ್ ಹೇಮ್ಲಾ (27), ಮಂಜುಳಾ ಹೇಮ್ಲಾ (25), ಮಂಗಳಿ ಮದ್ವಿ ಅಲಿಯಾಸ್ ಶಾಂತಿ (29), ಜೈರಾಮ್ ಕಡಿಯಂ (28) ಈ ಎಲ್ಲರ ತಲೆಗೂ ತಲಾ 8 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಇದಲ್ಲದೆ, ಮೂವರು ಕೇಡರ್‌ಗಳ ತಲೆಗೆ ತಲಾ 5 ಲಕ್ಷ ರೂ., 12 ಕೇಡರ್‌ಗಳ ತಲೆಗೆ ತಲಾ 2 ಲಕ್ಷ ರೂ. ಮತ್ತು 8 ಕೇಡರ್‌ಗಳ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪುನರ್ವಸತಿ ನೀತಿಯು ಮಾವೋವಾದಿಗಳು ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಲು ಪ್ರೋತ್ಸಾಹಿಸುತ್ತಿದೆ ಎಂದು ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದು, ಉಳಿದ ಮಾವೋವಾದಿಗಳು ಹಿಂಸಾಚಾರದ ಮಾರ್ಗವನ್ನು ತ್ಯಜಿಸುವಂತೆ ಮನವಿ ಮಾಡಿದ್ದಾರೆ.
ಮಾವೋವಾದಿಗಳು ದಾರಿತಪ್ಪಿಸುವ ಮತ್ತು ಹಿಂಸಾತ್ಮಕ ಸಿದ್ಧಾಂತಗಳನ್ನು ತ್ಯಜಿಸಿ ಭಯವಿಲ್ಲದೆ ಸಮಾಜಕ್ಕೆ ಮರಳಬೇಕು. ‘ಪೂನಾ ಮಾರ್ಗಂ’ ಅಭಿಯಾನವು ಶರಣಾಗುವವರಿಗೆ ಸುರಕ್ಷಿತ, ಗೌರವಾನ್ವಿತ ಮತ್ತು ಸ್ವಾವಲಂಬಿ ಭವಿಷ್ಯವನ್ನು ಖಾತ್ರಿಗೊಳಿಸುತ್ತದೆ. ಈ ಶರಣಾಗತಿಯೊಂದಿಗೆ, ಜನವರಿ 2024 ರಿಂದ ಇದುವರೆಗೆ ಜಿಲ್ಲೆಯಲ್ಲಿ ಹಿಂಸಾಚಾರವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ ಮಾವೋವಾದಿಗಳ ಸಂಖ್ಯೆ 790ಕ್ಕೆ ಏರಿಕೆಯಾಗಿದೆ ಎಂದು ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 202 ನಕ್ಸಲರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದಾರೆ ಮತ್ತು 1,031 ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಕಳೆದ 23 ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ ಉನ್ನತ ಕೇಡರ್‌ಗಳು ಸೇರಿದಂತೆ 2,200 ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


