ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’ ಹೋರಾಟ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ್ದಾರೆ.
ಈ ವೇಳೆ ಸಂಬಂಧಪಟ್ಟ ಸಚಿವರು ಸಭೆ ಕರೆದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ ಎಂದಿರುವ ಅವರು, ಈ ವಿಚಾರಗಳ ಬಗ್ಗೆ ಸಿಎಂ ಜೊತೆಯಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಜೊತೆಗೆ ಕಾಯ್ದೆ ಜಾರಿಯಾದರೂ ಮೈಕ್ರೋ ಫೈನಾನ್ಸ್ ಹಾವಳಿ ಇನ್ನೂ ತಪ್ಪಿಲ್ಲ, ದೇವನಹಳ್ಳಿ ಭೂಸ್ವಾಧೀನ ವಿಚಾರದಲ್ಲಿ ನಾನೂ ಸಹ ನಿಮ್ಮ ರೀತಿಯೇ ಸಿಎಂ ಅವರ ಜೊತೆಗೆ ಮಾತನಾಡಿದ್ದೆ, ಸಿಎಂ ಡಿ ನೋಟಿಫೈ ಗೆ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಈಗ ನೀವು ನೀಡಿರುವ ಇತರ ವಿಚಾರಗಳ ಬಗ್ಗೆಯೂ ಸಿಎಂ ಜೊತೆಗೆ ಮಾತಾಡುವಾದಾಗಿ ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.
ನಿಮ್ಮ ಬೇಡಿಕೆಗಳು ಈಡೇರಿಸಲೇಬೇಕಾದ ವಿಚಾರಗಳಾಗಿವೆ. ಸಿಎಂ ಜೊತೆಯಲ್ಲಿ ಮೊದಲ ಆದ್ಯತೆಯಾಗಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನಿಮ್ಮ ಪಾತ್ರವೂ ಇದೇ ಎಂದು ಹೇಳಿದ್ದಾರೆ. ಅಲ್ಲದೇ ಪಾಲಿಸಿಗಳನ್ನು ಜಾರಿ ಮಾಡುವಾಗ ಜನರ ಪರವಾಗಿರುವುದು ಪ್ರಜಾಪ್ರಭುತ್ವ, ನಿಮ್ಮ ಬಗ್ಗೆ ನಮಗೆ ಗೌರವ ಇದೆ.
ಹೋರಾಟವೇ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುತ್ತದೆ. ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕು. ಕೋಮುವಾದಿಗಳು ಮತೀಯವಾದಿಗಳು ತಲೆ ಎತ್ತಿದರೆ ನಮಗೆ ತೊಂದರೆ ಆಗುತ್ತದೆ.
ಅದನ್ನು ನಾವು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡೋಣ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೇ ಈಗ ಮುಖ್ಯಮಂತ್ರಿಗಳೊಂದಿಗೆ ನಡೆಯುವ ಸಭೆಯಲ್ಲಿ ನಿಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.


