ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್ 26) ಪುನರುಚ್ಚರಿಸಿದ್ದಾರೆ.
ಎನ್‌ಆರ್‌ಸಿ ಭಾರತೀಯ ನಾಗರಿಕರ ಪಟ್ಟಿಯನ್ನು ರಚಿಸುವ ಮತ್ತು ದಾಖಲೆರಹಿತ ವಲಸಿಗರನ್ನು ಗುರುತಿಸುವ ಒಂದು ಪ್ರಕ್ರಿಯೆಯಾಗಿದೆ.
ಅಸ್ಸಾಂನಲ್ಲಿ 2019ರಲ್ಲಿ ಎನ್‌ಆರ್‌ಸಿ ಮಾಡಲಾಗಿದೆ. ಈ ವೇಳೆ ಜನರ ಪೂರ್ವಜರ ಕುಟುಂಬದ ದಾಖಲೆಗಳನ್ನು ದೊಡ್ಡ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗಿದೆ. ಅಂತಿಮ ಎನ್‌ಆರ್‌ಸಿ ಪಟ್ಟಿಯಿಂದ ರಾಜ್ಯದ 19 ಲಕ್ಷ ಜನರನ್ನು ಅಕ್ರಮ ವಲಸಿಗರು ಎಂದು ಹೊರಗಿಡಲಾಗಿದೆ. ಈ ಕುರಿತ ಅಧಿಕೃತ ಪಟ್ಟಿಯನ್ನು ಆರು ವರ್ಷಗಳ ನಂತರ ಇಂದಿಗೂ ಪ್ರಕಟಿಸಿಲ್ಲ.
ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳು ನವೆಂಬರ್ 4ರಿಂದ ಮನೆ ಮನೆ ಎಣಿಕೆ ನಮೂನೆಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.
2026ರ ಮೊದಲಾರ್ಧದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಡಿಸೆಂಬರ್ 9ರಿಂದ ಜನವರಿ 8 ರವರೆಗೆ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಮತ್ತು ಜನವರಿ 31ರವರೆಗೆ ವಿಚಾರಣೆಗಳು ನಡೆಯಲಿವೆ. ಫೆಬ್ರವರಿ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಬುಧವಾರ ಸಂವಿಧಾನ ದಿನದ ಅಂಗವಾಗಿ ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಸ್ವಾತಂತ್ರ್ಯ ಬಂದು ದಶಕಗಳ ನಂತರ ಜನರ ಪೌರತ್ವವನ್ನು ಪ್ರಶ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಮಮತಾ ಬ್ಯಾನರ್ಜಿ, “ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ, ಜಾತ್ಯತೀತತೆಯು ಅಪಾಯದ ಪರಿಸ್ಥಿತಿಯಲ್ಲಿ ಇರುತ್ತದೆ. ಒಕ್ಕೂಟ ವ್ಯವಸ್ಥೆಯು ಬುಲ್ಡೋಜರ್ ಆಗುತ್ತಿರುವಾಗ, ಸಂವಿಧಾನ ಒದಗಿಸಿದ ಅಮೂಲ್ಯ ಮಾರ್ಗದರ್ಶನವನ್ನು ಜನರು ರಕ್ಷಿಸಬೇಕು” ಎಂದಿದ್ದರು.
ಅಕ್ಟೋಬರ್ 28ರಂದು, 57 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಬರೆದ ಪತ್ರದಲ್ಲಿ ಅವರು ಎನ್‌ಆರ್‌ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಎಂದಿಗೂ ಎನ್‌ಆರ್‌ಸಿ ನಡೆಸಲು ಬಿಡುವುದಿಲ್ಲ. ನಮ್ಮ ಜನರ ಘನತೆ ಅಥವಾ ಸಂಬಂಧವನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನವೆಂಬರ್ 21ರಂದು, ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಈ ದುರುಪಯೋಗಕ್ಕೆ ಜನರನ್ನು ಬಲಿ ಕೊಡುವುದು ಅಸಹನೀಯ ಎಂದಿದ್ದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಎಸ್‌ಐಆರ್ ಪ್ರಕ್ರಿಯೆ ಆತಂಕಕಾರಿ ಮತ್ತು ಅಪಾಯಕಾರಿ ಹಂತವನ್ನು ತಲುಪಿದೆ. ಎಸ್‌ಐಆರ್ ನಡೆಸುತ್ತಿರುವ ವಿಧಾನ ಸರಿಯಾಗಿಲ್ಲ. ನಾಗರಿಕರು ಮತ್ತು ಅಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಒತ್ತಿ ಹೇಳಿದ್ದರು.


